ಮೂರನೇ ಅಲೆ ಭೀತಿ, ರಾಜ್ಯದಲ್ಲಿ ಕಟ್ಟೆಚ್ಚರ, ನೆರೆ ರಾಜ್ಯಗಳಲ್ಲಿ ಕೊವಿಡ್ ಹೆಚ್ಚಳ, ಅಂತರಾಜ್ಯ ಗಡಿಗಳು ಬಂದ್, ಅಗತ್ಯಕ್ಕಾಗಿ ರಾಜ್ಯ ಪ್ರವೇಶಕ್ಕೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಮೂರನೇ ಅಲೆ ಭೀತಿ, ರಾಜ್ಯದಲ್ಲಿ ಕಟ್ಟೆಚ್ಚರ, ನೆರೆ ರಾಜ್ಯಗಳಲ್ಲಿ ಕೊವಿಡ್ ಹೆಚ್ಚಳ, ಅಂತರಾಜ್ಯ ಗಡಿಗಳು ಬಂದ್' ಅಗತ್ಯಕ್ಕಾಗಿ ರಾಜ್ಯ ಪ್ರವೇಶಕ್ಕೆ ನೆಗೆಟಿವ್ ರಿಪೋರ್ಟ್ ಕಡ್ಡಾಯಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಏರಿಕೆ ಕಂಡುಬಂದಿರುವುದರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ ಸೇರಿದಂತೆ ಕೆಲವು ಬಿಗಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಕೆಲವೆಡೆ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ ಆದೇಶ ಹೊರಡಿಸಲಾಗಿದೆ.


ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಎರಡೂ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶಿಸಲಾಗಿತ್ತು. ಆದರೆ, ಕೆಲವು ದಿನಗಳಿಂದ ರಾಜ್ಯದ ಒಳ ನಾಡಿನಲ್ಲೂ ಕೋವಿಡ್‌ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗುತ್ತಿದೆ. ಮತ್ತೆ ಸೋಂಕು ಹರಡದಂತೆ ನಿಯಂತ್ರಿಸುವ ಉದ್ದೇಶದಿಂದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಬೀದರ್‌, ಬೆಳಗಾವಿ ಒಳನಾಡಿನ ದಾವಣಗೆರೆ, ಉಡುಪಿ, ಧಾರವಾಡ, ಕೊಪ್ಪಳ ಸೇರಿದಂತೆ ಹಲವು ಕಡೆಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ.


ರಾತ್ರಿ ಕರ್ಫ್ಯೂ ಮರು ಜಾರಿ: ಲಾಕ್‌ಡೌನ್‌ ಸಡಿಲಿಕೆ ಆದ ಬಳಿಕವೂ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿಡಲಾಗಿತ್ತು. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಅನುಷ್ಠಾನ ಸ್ಥಗಿತಗೊಂಡಿತ್ತು. ಜನರ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಮಂಗಳವಾರದಿಂದ ಕೆಲವು ಜಿಲ್ಲೆಗಳಲ್ಲಿ ಪುನಃ ಕಟ್ಟುನಿಟ್ಟಾಗಿ ರಾತ್ರಿ ಕರ್ಫ್ಯೂ ಜಾರಿಗೆ ಆದೇಶ ಹೊರಡಿಸಲಾಗಿದೆ.


ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರದಿಂದ ಆ.16ರವರೆಗೂ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮಾಸ್ಕ್‌ ಧರಿಸದೇ ಓಡಾಡುವವರಿಗೆ ದಂಡ ವಿಧಿಸುವುದಕ್ಕೂ ಆದೇಶ ಹೊರಡಿಸಲಾಗಿದೆ.


ಬೆಳಗಾವಿ: 'ಕೋವಿಡ್-19 ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಗಡಿಯಲ್ಲಿ ನಿಗಾ ವಹಿಸಬೇಕು. ಸರ್ಕಾರದ ಮಾರ್ಗಸೂಚಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು' ಎಂದು ಎಡಿಜಿಪಿ ಉಮೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


'ಯಾವುದೇ ಕಾರಣಕ್ಕೂ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುವ ಪ್ರಯಾಣಿಕರ ಆರ್‌ಟಿಪಿಸಿಆರ್ ವರದಿ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರವೇಶ ನೀಡಬೇಕು. ಇಲ್ಲದವರನ್ನು ವಾಪಸ್ ಕಳುಹಿಸಬೇಕು. ಈ ಮೂಲಕ ಸೋಂಕು ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು' ಎಂದರು.


ಬೀದರ: ಜಿಲ್ಲೆಯ ಗಡಿ ಭಾಗದಲ್ಲೂ ಬಿಗಿ ಕ್ರಮ ಕೈಗೊಳ್ಳಲಾಗಿದ್ದು ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಇದ್ದರೆ ಮಾತ್ರ ಅಂತಾರಾಜ್ಯ ಪ್ರಯಾಣಿಕರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ. ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆದು ಗಡಿ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರನ್ನು ಪರಿಶೀಲಿಸಿ ಬಿಡಲಾಗುತ್ತಿದೆ.


ಬೀದರ್‌ ಜಿಲ್ಲೆಯಲ್ಲಿ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶಗಳಲ್ಲಿ ಆರು ತನಿಖಾ ಠಾಣೆಗಳನ್ನು ತೆರದಿದ್ದು, ಆರ್‌ಟಿ-ಪಿಸಿಆರ್‌ ವಿಧಾನದಲ್ಲಿ ಪಡೆದಿರುವ ನೆಗೆಟಿವ್‌ ವರದಿ ಇಲ್ಲದವರನ್ನು ವಾಪಸ್‌ ಕಳುಹಿಸಲಾಗುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೂ ಕೋವಿಡ್‌ ನೆಗಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.


ಪದವಿ ಪರೀಕ್ಷೆಗಳು ರದ್ದು: ದಕ್ಷಿಣ ಕನ್ನಡ: ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರದಿಂದಲೇ ಹಲವು ನಿರ್ಬಂಧಗಳು ಜಾರಿಯಲ್ಲಿವೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಆದೇಶದಂತೆ, ಮಂಗಳೂರು ವಿಶ್ವವಿದ್ಯಾಲಯದ ಎಲ್ಲ ಪದವಿ ತರಗತಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿ, ತರಗತಿಗಳನ್ನು ಮುಂದೂಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.


ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸಭೆ ಹಾಗೂ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಮದುವೆಗಳಿಗೆ 50 ಜನರ ಮಿತಿ ವಿಧಿಸಲಾಗಿದೆ. ಕೇರಳ ಗಡಿಯಿಂದ 5 ಕಿ.ಮೀ. ದೂರದವರೆಗೂ ಇರುವ ಮದ್ಯದಂಗಡಿಗಳನ್ನು ಮಂಗಳವಾರದಿಂದ ಆಗಸ್ಟ್‌ 15ರವರೆಗೂ ಮುಚ್ಚಲಾಗಿದೆ.


ಉಡುಪಿ ಜಿಲ್ಲೆಯ 10 ಸ್ಥಳಗಳಲ್ಲಿ ತನಿಖಾ ಠಾಣೆಗಳನ್ನು ತೆರದಿದ್ದು, ಪ್ರಯಾಣಿಕರ ದೇಹದ ಉಷ್ಣಾಂಶ ತಪಾಸಣೆ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್‌ ವಿಧಾನದಲ್ಲಿ ಪಡೆದಿರುವ ಕೋವಿಡ್‌ ವರದಿ ಕಡ್ಡಾಯಗೊಳಿಸಲಾಗಿದೆ. ಹೋಟೆಲ್‌, ಲಾಡ್ಜ್‌ಗಳಲ್ಲಿ ಕೊಠಡಿ ಕಾಯ್ದಿರಿಸುವುದಕ್ಕೂ ವರದಿ ಕಡ್ಡಾಯಗೊಳಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.


ದೇವಸ್ಥಾನ ಪ್ರವೇಶಕ್ಕೆ ನಿಷೇಧ: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ತುಂಗಭದ್ರಾ ಜಲಾಶಯ ಮತ್ತು ಪಂಪಾವನಕ್ಕೆ ಆ.17ರರೆಗೂ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.


ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಸಿದ್ಧತೆ

ರಾಜಧಾನಿಯಲ್ಲಿ ರಾತ್ರಿ ವೇಳೆ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂ‍ಪಿ ಹಾಗೂ ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿವೆ.


ನಗರದಲ್ಲಿ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಕರ್ಫ್ಯೂ ಈಗಲೂ ಜಾರಿಯಲ್ಲಿದೆ. ಆದರೆ, ಕಟ್ಟುನಿಟ್ಟಾಗಿ ಅನುಷ್ಠಾನ ಆಗುತ್ತಿರಲಿಲ್ಲ. ರಾತ್ರಿ ಕರ್ಫ್ಯೂ ಅನುಷ್ಠಾನದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, 'ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ನಿಬಂಧನೆಗಳನ್ನು ಯಾವ ರೀತಿ ಜಾರಿಗೊಳಿಸಬೇಕು ಎಂದು ಚರ್ಚಿಸಿದ್ದೇವೆ. ಎರಡನೇ ಅಲೆಯ ಉತ್ತುಂಗದಲ್ಲಿದ್ದಾಗ ನಿಬಂಧನೆಗಳನ್ನು ಯಾವ ರೀತಿ ಜಾರಿಗೊಳಿಸಲಾಗಿತ್ತೋ ಅದೇ ಮಾದರಿಯನ್ನು ಈಗಲೂ ಅನುಸರಿಸಲಿದ್ದೇವೆ. ಬಸ್‌, ಟ್ಯಾಕ್ಸಿ, ಆಟೊಗಳಿಗೆ ಸಂಬಂಧಿಸಿದ ನಿಬಂಧನೆಗಳೂ ಮುಂದುವರಿಯಲಿವೆ' ಎಂದರು.


ಶಾಲೆ ಆರಂಭ: ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ

'ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾ‍ರ್ಯದರ್ಶಿ ಎಸ್.ಆರ್.‌ ಉಮಾಶಂಕರ್‌ ತಿಳಿಸಿದರು.


ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮೂರನೇ ಅಲೆಯ ಆತಂಕದ ಮಧ್ಯೆ, ಆಗಸ್ಟ್‌ 16ರಿಂದ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಅವರು, 'ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ' ಎಂದು ಸ್ಪಷ್ಟಪಡಿಸಿದರು.

Previous Post Next Post