SSLC ಫಲಿತಾಂಶ ಇಂದು ಮಧ್ಯಾಹ್ನ 3.30 ಕ್ಕೆ ಪ್ರಕಟ, ಗೊಂದಲ ಬೇಡ, ಇಲ್ಲಿದೆ ಫಲಿತಾಂಶ ನೋಡುವ ಮಾಹಿತಿ

SSLC ಫಲಿತಾಂಶ ಇಂದು ಮಧ್ಯಾಹ್ನ 3.30 ಕ್ಕೆ ಪ್ರಕಟ, ಗೊಂದಲ ಬೇಡ, ಇಲ್ಲಿದೆ ಫಲಿತಾಂಶ ನೋಡುವ ಮಾಹಿತಿ


ಬೆಂಗಳೂರು: ಕರ್ನಾಟಕ ರಾಜ್ಯ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ (SSLC Result 2021) ಪ್ರಕಟಣೆಗೆ ಸಿದ್ಧವಾಗಿದ್ದು, ಇಂದು ಲಭ್ಯವಾಗಲಿದೆ. ಇಂದು (ಆಗಸ್ಟ್ 09) ಮಧ್ಯಾಹ್ನ 3.30ಕ್ಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಿಗದಿಪಡಿಸಲಾಗಿದ್ದು, ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಫಲಿತಾಂಶ ಪ್ರಕಟಿಸಲಿದ್ದಾರೆ. ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್​ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.


ನಾಲ್ಕೈದು ದಿನಗಳ ಮೊದಲೇ ಮೌಲ್ಯಮಾಪನ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸುವುದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಶಿಕ್ಷಣ ಇಲಾಖೆಯ (Education Department) ಪ್ರಧಾನ ಕಾರ್ಯದರ್ಶಿ ಉಮಾಶಂಕರ ಅವರಿಗೆ ಎಸ್​ಎಸ್​ಎಲ್​ಸಿ ಬೋರ್ಡ್ ನಿರ್ದೇಶಕಿ ವಿ.ಸುಮಂಗಲ ಈಗಾಗಲೇ ಫಲಿತಾಂಶ ಸಲ್ಲಿಸಿದ್ದಾರೆ. ಇದೀಗ ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶ ಪ್ರಕಟ ಮಾಡಲಿದ್ದು, ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬೀಳಲಿದೆ.


ಈ ಬಾರಿ ಜುಲೈ 19 ಹಾಗು 22 ರಂದು ಎರಡು ದಿನಗಳ ಕಾಲ ಎಸ್‌ಎಸ್‌ಎಲ್​ಸಿ ಪರೀಕ್ಷೆ ನಡೆದಿದ್ದು, ಶೇ. 99.65 ವಿದ್ಯಾರ್ಥಿಗಳು ಹಾಜರಾಗಿದ್ದರು. ಕೊರೊನಾ ಆತಂಕದ ನಡುವೆಯೂ ರಾಜ್ಯದಲ್ಲಿ ಈ ವರ್ಷ 8,19,694 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನು ಒಂದು ಪ್ರಶ್ನೆ ಪತ್ರಿಕೆಯಲ್ಲಿ ಹಾಗೂ ಭಾಷಾ ವಿಷಯಗಳನ್ನು ಒಂದು ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗಿದ್ದು, ಕನ್ನಡದಲ್ಲಿ ಒಂದು ಕೃಪಾಂಕ ವಿದ್ಯಾರ್ಥಿಗಳಿಗೆ ದೊರೆಯಲಿದೆ.


ಫಲಿತಾಂಶ ಪ್ರಕಟವಾದ ನಂತರ ನಿಮ್ಮ ಎಸ್​ಎಸ್​ಎಲ್​ಸಿ ರಿಸಲ್ಟ್ ವೀಕ್ಷಿಸಲು ಹೀಗೆ ಮಾಡಿ


1. ಕರ್ನಾಟಕ ಸರ್ಕಾರದ ಅಧಿಕೃತ ವೆಬ್​ಸೈಟ್ sslc.karnataka.gov.in ಕ್ಲಿಕ್ ಮಾಡಿ
2. ಸ್ಕ್ರೀನ್​ನಲ್ಲಿ ರಿಸಲ್ಟ್​ ಲಿಂಕ್ ಕಾಣಿಸಿಕೊಳ್ಳುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ
3. ನಿಮ್ಮ ರೆಜಿಸ್ಟರ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ
4. ರೆಜಿಸ್ಟರ್ ನಂಬರ್ ಜೊತೆಗೆ ಅಲ್ಲಿ ಕೇಳುವ ನಿಮ್ಮ ಇತರೆ ಮಾಹಿತಿಗಳನ್ನೂ ತುಂಬಿರಿ
5. ಫಲಿತಾಂಶವನ್ನು ವೀಕ್ಷಿಸಲು ನಿಮ್ಮ ಮಾಹಿತಿಯನ್ನು ಸಬ್ಮಿಟ್ ಮಾಡಿ
6. ತಾತ್ಕಾಲಿಕ ಅಂಕಪಟ್ಟಿ ಆನ್​ಲೈನ್​ನಲ್ಲೇ ಲಭ್ಯವಾಗಲಿದ್ದು, ಅಲ್ಲಿಂದಲೇ ಡೌನ್​ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ.


ಮರುಮೌಲ್ಯಮಾಪನಕ್ಕೆ ಅವಕಾಶ ಇದೆಯಾ?
ಫಲಿತಾಂಶದ ಬಗ್ಗೆ ಅಸಮಾಧಾನವಿದ್ದಲ್ಲಿ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಒಂದುವೇಳೆ ಮರುಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಶಿಕ್ಷಕರ ಸಹಾಯ ಪಡೆದು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ ಮನವಿ ಮಾಡಬಹುದು.


ಈ ವೆಬ್​ಸೈಟ್​ಗಳಲ್ಲಿ ಫಲಿತಾಂಶ ವೀಕ್ಷಿಸಿ
sslc.karnataka.gov.in
kseeb.kar.nic.in
karresults.nic.in

Previous Post Next Post