ಭೂಮಿಯತ್ತ ಸುನಿತಾ, ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಸ್ಪೇಸ್ಎಕ್ಸ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ
ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಮರಳಲಿದ್ದಾರೆ. ಸ್ಪೇಸ್ಎಕ್ಸ್ನ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟಿದೆ.
ಸಮುದ್ರದಲ್ಲಿ ಇಳಿದ ನಂತರದ ಪ್ರಕ್ರಿಯೆಗಳೇನು?
1. ಅಟ್ಲಾಂಟಿಕ್ ಸಮುದ್ರದಲ್ಲಿ ಇಳಿಯುವಿಕೆ
ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್, ನಿಕ್ ಹೇಗ್, ಮತ್ತು ಅಲೆಕ್ಸಾಂಡರ್ ಗೊರ್ಬುನೊವ್ ಅವರನ್ನು ಒಳಗೊಂಡ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಸಂಜೆ ಸುಮಾರು 5:57ಕ್ಕೆ (ಭಾರತೀಯ ಕಾಲಮಾನದಲ್ಲಿ ಬುಧವಾರ, ಮಾರ್ಚ್ 19ರ ಬೆಳಗ್ಗೆ 4:27) ಸಮುದ್ರದಲ್ಲಿ ಇಳಿಯುವ ನಿರೀಕ್ಷೆಗಳಿವೆ. ಬಾಹ್ಯಾಕಾಶ ನೌಕೆ ಇಳಿಯುವ ಸ್ಥಳವನ್ನು ಜಾಗರೂಕವಾಗಿ ನಿರ್ಧರಿಸಲಾಗಿದ್ದು, ಹವಾಮಾನ ಪರಿಸ್ಥಿತಿ ಮತ್ತು ಸಮುದ್ರದ ಸನ್ನಿವೇಶಗಳನ್ನು ಆಧರಿಸಿದೆ. ಬಳಿಕ ಗಗನಯಾತ್ರಿಗಳನ್ನು ಸುಗಮ ಮತ್ತು ಸುರಕ್ಷಿತವಾಗಿ ರಕ್ಷಿಸಲಾಗುತ್ತದೆ.
2. ತಕ್ಷಣದ ರಕ್ಷಣಾ ಕಾರ್ಯಾಚರಣೆ
ಬಾಹ್ಯಾಕಾಶ ನೌಕೆ ಸಮುದ್ರದಲ್ಲಿ ಇಳಿಯುತ್ತಿದ್ದಂತೆ, ಸ್ಪೇಸ್ ಎಕ್ಸ್ ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಧಾವಿಸಲಿವೆ. ಕ್ರೇನ್ಗಳು ಮತ್ತು ವೈದ್ಯಕೀಯ ವ್ಯವಸ್ಥೆಗಳನ್ನು ಒಳಗೊಂಡ ವಿಶೇಷ ಹಡಗುಗಳು ಕ್ಯಾಪ್ಸುಲ್ ಕಡೆ ಧಾವಿಸಲಿವೆ. ಮುಳುಗು ತಜ್ಞರು ಬಾಹ್ಯಾಕಾಶ ನೌಕೆಯನ್ನು ರಕ್ಷಿಸಿ, ಅದರ ಸ್ಥಿರತೆಯನ್ನು ಪರೀಕ್ಷಿಸಿ, ಬಳಿಕ ರಕ್ಷಣಾ ನೌಕೆಗೆ ಅದನ್ನು ಜೋಡಿಸಲಿದ್ದಾರೆ. ಬಾಹ್ಯಾಕಾಶ ನೌಕೆ ಜಾರುವುದರಿಂದ ರಕ್ಷಿಸಲು ಮತ್ತು ಸುಗಮ ರಕ್ಷಣಾ ಕಾರ್ಯಾಚರಣೆ ನಡೆಸಲು ಈ ಹಂತ ಅತ್ಯಂತ ಮುಖ್ಯವಾಗಿದೆ.
3. ಬಾಹ್ಯಾಕಾಶ ನೌಕೆಯಿಂದ ಸಿಬ್ಬಂದಿ ರಕ್ಷಣೆ
ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ರಕ್ಷಣಾ ನೌಕೆಗೆ ಎತ್ತಿದ ಬಳಿಕ, ಕ್ರ್ಯೂ ಡ್ರ್ಯಾಗನ್ನಿನ ಹ್ಯಾಚ್ ಅನ್ನು ತೆರೆಯಲಾಗುತ್ತದೆ. ಅದರಿಂದ ಗಗನಯಾತ್ರಿಗಳನ್ನು ಜಾಗರೂಕವಾಗಿ ಹೊರಗೆ ಕರೆತರಲಾಗುತ್ತದೆ. ಹಲವಾರು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದ ಬಳಿಕ, ಇದ್ದಕ್ಕಿದ್ದಂತೆ ಭೂಮಿಯ ಗುರುತ್ವಾಕರ್ಷಣೆಗೆ ಆಗಮಿಸಿದಾಗ ಗಗನಯಾತ್ರಿಗಳು ತಲೆಸುತ್ತು, ಸ್ನಾಯುಗಳ ದೌರ್ಬಲ್ಯ, ಮತ್ತು ಸಮತೋಲನದ ಕೊರತೆ ಎದುರಿಸುವುದರಿಂದ, ಅವರಿಗೆ ನೆರವಾಗಲು ವೈದ್ಯಕೀಯ ಸಿಬ್ಬಂದಿಗಳೂ ಉಪಸ್ಥಿತರಿರುತ್ತಾರೆ.
4.ಸಮುದ್ರದಲ್ಲೇ ಆರಂಭಿಕ ಆರೋಗ್ಯ ತಪಾಸಣೆಗಳು
ಭೂಮಿಗೆ ಮರಳುವ ಮುನ್ನ, ಅವರನ್ನು ರಕ್ಷಿಸಿದ ಹಡಗಿನಲ್ಲೇ ಗಗನಯಾತ್ರಿಗಳ ಪೂರ್ವಭಾವಿ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳ ಅವರ ತಕ್ಷಣದ ದೈಹಿಕ ಪರಿಸ್ಥಿತಿ ಮತ್ತು ಸುದೀರ್ಘ ಬಾಹ್ಯಾಕಾಶ ವಾಸದ ಪರಿಣಾಮವಾಗಿ ಸ್ನಾಯು ನಷ್ಟ, ದೃಷ್ಟಿಯಲ್ಲಿನ ಬದಲಾವಣೆಗಳು, ಮತ್ತು ದೇಹದ ದ್ರವಗಳಲ್ಲಿನ ಬದಲಾವಣೆಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆಯೇ ಎಂಬ ಕುರಿತ ಮಾಹಿತಿಗಳನ್ನು ಒದಗಿಸಲಿವೆ.
5.ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರ
ಆರಂಭಿಕ ವೈದ್ಯಕೀಯ ತಪಾಸಣೆಗಳ ಬಳಿಕ, ಗಗನಯಾತ್ರಿಗಳನ್ನು ಹೆಲಿಕಾಪ್ಟರ್ ಅಥವಾ ಬೋಟ್ ಮೂಲಕ ಫ್ಲೋರಿಡಾದಲ್ಲಿರುವ ಕೆನೆಡಿ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಈ ಕೇಂದ್ರ ಆಧುನಿಕ ವೈದ್ಯಕೀಯ ಮತ್ತು ವಿವರಣಾ ಕೇಂದ್ರಗಳನ್ನು ಹೊಂದಿದ್ದು, ಗಗನಯಾತ್ರಿಗಳು ಇಲ್ಲಿ ಹೆಚ್ಚಿನ ಪರೀಕ್ಷೆಗಳು ಮತ್ತು ಯೋಜನಾ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ.
6. ಸಮಗ್ರ ವೈದ್ಯಕೀಯ ಪರೀಕ್ಷೆಗಳು
ಕೆನೆಡಿ ಬಾಹ್ಯಾಕಾಶ ಕೇಂದ್ರದಲ್ಲಿ, ಗಗನಯಾತ್ರಿಗಳಿಗೆ ವಿಸ್ತೃತ ವೈದ್ಯಕೀಯ ತಪಾಸಣೆ ನಡೆಸಿ, ಬಾಹ್ಯಾಕಾಶದಲ್ಲಿ ಹೆಚ್ಚಿನ ಸಮಯ ಕಳೆದುದರಿಂದ ಅವರ ಮೇಲೆ ಆಗಿರಬಹುದಾದ ಪರಿಣಾಮಗಳನ್ನು ತಿಳಿಯಲಾಗುತ್ತದೆ. ಇದು ಹಲವು ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
ಅವೆಂದರೆ:
ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಉಂಟಾಗುವ ಸ್ನಾಯು ಮತ್ತು ಮೂಳೆಗಳ ಸಾಂದ್ರತೆಯ ನಷ್ಟ
ದೈಹಿಕ ದ್ರವಗಳ ಬದಲಾವಣೆಯಿಂದ ದೃಷ್ಟಿಯಲ್ಲಿ ಉಂಟಾಗುವ ವ್ಯತ್ಯಾಸಗಳು
ಅರಿವು ಮತ್ತು ಮಾನಸಿಕ ಆರೋಗ್ಯದ ಮೇಲೆ ಬಾಹ್ಯಾಕಾಶ ಯಾನದ ಪರಿಣಾಮದ ಪರೀಕ್ಷೆ
7. ವಿವರಣೆಗಳು ಮತ್ತು ಯೋಜನಾ ಮೌಲ್ಯಮಾಪನ
ಗಗನಯಾತ್ರಿಗಳು ಭೂಮಿಗೆ ಆಗಮಿಸಿದ 24ರಿಂದ 48 ಗಂಟೆಗಳ ಒಳಗಾಗಿ, ನಾಸಾ ಅವರೊಡನೆ ವಿವರಣಾ ಮಾತುಕತೆಗಳನ್ನು ಆರಂಭಿಸುತ್ತದೆ. ಈ ಸಂವಾದಗಳು ಹಲವು ಅಂಶಗಳತ್ತ ಗಮನ ಹರಿಸುತ್ತವೆ.
ಅವೆಂದರೆ:
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುದೀರ್ಘ ವಾಸ್ತವ್ಯದ ಸಂದರ್ಭದಲ್ಲಿ ಅವರು ಎದುರಿಸಿದ ಸವಾಲುಗಳು
ಅವರು ಕೈಗೊಂಡ ವೈಜ್ಞಾನಿಕ ಪ್ರಯೋಗಗಳು ಮತ್ತು ಅವುಗಳ ಫಲಿತಾಂಶಗಳು
ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಉತ್ತಮಗೊಳಿಸಲು ಕಾರ್ಯಾಚರಣಾ ಪ್ರತಿಕ್ರಿಯೆಗಳು
ಈ ಮೂಲಕ ಕಲೆಹಾಕುವ ಮಾಹಿತಿಗಳು ನಾಸಾಗೆ ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಉತ್ತಮಗೊಳಿಸಿ, ಭವಿಷ್ಯದಲ್ಲಿ ಚಂದ್ರ, ಮಂಗಳ ಗ್ರಹಗಳಿಗೆ, ಮತ್ತು ಅವುಗಳಾಚೆಗೆ ಪ್ರಯಾಣ ಬೆಳೆಸುವ ಗಗನಯಾತ್ರಿಗಳ ಯೋಜನೆಗಳನ್ನು ಸುಗಮವಾಗಿಸಲು ನೆರವಾಗುತ್ತವೆ.
8. ಪುನಶ್ಚೇತನ ಮತ್ತು ಚೇತರಿಕೆ
ಬಾಹ್ಯಾಕಾಶದಲ್ಲಿ ಬಹುತೇಕ ಒಂದು ವರ್ಷವನ್ನು ಕಳೆದ ಬಳಿಕ, ಗಗನಯಾತ್ರಿಗಳು ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಈ ಚೇತರಿಕಾ ಪ್ರಕ್ರಿಯೆ ಹಲವು ಅಂಶಗಳನ್ನು ಒಳಗೊಂಡಿರುತ್ತದೆ.
ಅವೆಂದರೆ:
ಸ್ನಾಯುಗಳ ಶಕ್ತಿಯನ್ನು ಮರಳಿ ಪಡೆಯಲು ದೈಹಿಕ ಚಿಕಿತ್ಸೆ
ಅವರು ಮರಳಿ ಸಹಜವಾಗಿ ನಡೆಯುವಂತಾಗಲು ವ್ಯಾಯಾಮಗಳು
ಭೂಮಿಯಲ್ಲಿನ ದೈನಂದಿನ ಜೀವನಕ್ಕೆ ಹೊಂದಿಕೊಳ್ಳಲು ನೆರವಾಗಲು ಮಾನಸಿಕ ಬೆಂಬಲ
ಈ ಪುನಶ್ಚೇತನ ಹಂತ ಅತ್ಯಂತ ಮುಖ್ಯವಾಗಿದೆ. ಗಗನಯಾತ್ರಿಗಳು ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸುದೀರ್ಘ ಸಮಯ ಕಳೆದಿರುವುದರಿಂದ, ಅವರ ಮೂಳೆಗಳು, ಸ್ನಾಯುಗಳು, ಮತ್ತು ಸಮತೋಲನ ವ್ಯವಸ್ಥೆಗಳು ದುರ್ಬಲಗೊಂಡಿದ್ದು, ಅವರು ಹಂತ ಹಂತವಾಗಿ ತಮ್ಮ ಸಾಮರ್ಥ್ಯವನ್ನು ಮರಳಿ ಗಳಿಸಲು ಸಮಯ ಬೇಕಾಗುತ್ತದೆ. ಅದಕ್ಕೆ ಈ ಪುನಶ್ಚೇತನ ನೆರವು ನೀಡುತ್ತದೆ.
ಕಾತರದಿಂದ ಎದುರು ನೋಡುತ್ತಿದ್ದ ಪುನರಾಗಮನ!
ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯೋಗಿಗಳ ಪುನರಾಗಮನ ಸ್ಥಿರತೆ, ಸಹಿಷ್ಣುತೆ, ವೈಜ್ಞಾನಿಕ ಸಾಧನೆಗಳಿಗೆ ಸೂಕ್ತ ಉದಾಹರಣೆಯಾಗಿದೆ. ಮೂಲತಃ ಸಣ್ಣ ಅವಧಿಯ ಯೋಜನೆಯಾಗಿದ್ದ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಯಾತ್ರೆ, ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯ ತಾಂತ್ರಿಕ ದೋಷಗಳ ಕಾರಣದಿಂದಾಗಿ ವಿಳಂಬಗೊಳ್ಳುತ್ತಲೇ ಸಾಗಿತು. ಅವರನ್ನು ಭೂಮಿಗೆ ಮರಳಿ ಕರೆತರಲು ಸ್ಪೇಸ್ಎಕ್ಸ್ ರಂಗ ಪ್ರವೇಶ ಮಾಡಿರುವುದರಿಂದ, ಇದು ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳು ಮತ್ತು ವಾಣಿಜ್ಯಿಕ ಬಾಹ್ಯಾಕಾಶ ಸಹಯೋಗದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಸ್ವಾಗತಿಸುವ ಸಂದರ್ಭದಲ್ಲಿ, ಅವರ ಅನುಭವಗಳು ಭವಿಷ್ಯದ ಬಾಹ್ಯಾಕಾಶ ಅನ್ವೇಷಣೆಗಳನ್ನು ರೂಪಿಸಲು ನೆರವಾಗಲಿವೆ. ಚಂದ್ರ, ಮಂಗಳ ಗ್ರಹಗಳತ್ತ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸುವಾಗ ವಿಜ್ಞಾನಿಗಳಿಗೆ ಸುದೀರ್ಘ ಬಾಹ್ಯಾಕಾಶ ವಾಸಕ್ಕೆ ಮಾನವ ದೇಹ ಹೇಗೆ ಹೊಂದಿಕೊಳ್ಳುತ್ತದೆ ಎಂದು ತಿಳಿಯಲು ಈ ಯೋಜನೆ ನೆರವಾಗಲಿದೆ.