ನೆಗೆಟಿವ್ ವರದಿ ಕಡ್ಡಾಯ, ತಲಪಾಡಿಯಲ್ಲಿ ತಪಾಸಣೆ ಶುರು

ನೆಗೆಟಿವ್ ವರದಿ ಕಡ್ಡಾಯ, ತಲಪಾಡಿಯಲ್ಲಿ ತಪಾಸಣೆ ಶುರು


ಉಳ್ಳಾಲ (ದಕ್ಷಿಣ ಕನ್ನಡ): ಕೇರಳದ ಗಡಿಭಾಗ ತಲಪಾಡಿಯಲ್ಲಿ ರಾಜ್ಯವನ್ನು ಪ್ರವೇಶಿಸುವವರ ಕೋವಿಡ್‌ ನೆಗೆಟಿವ್‌ ವರದಿ ತಪಾಸಣೆ ಮಂಗಳವಾರ ಆರಂಭಗೊಂಡಿದೆ. ನೆಗೆಟಿವ್‌ ವರದಿ ಇಲ್ಲದವರಿಂದ ಸ್ಥಳದಲ್ಲಿಯೇ ಗಂಟಲು ದ್ರವ ಸಂಗ್ರಹಿಸಲಾಗುತ್ತಿದೆ.


ಪೊಲೀಸ್, ಆರೋಗ್ಯ, ಶಿಕ್ಷಣ, ಕಂದಾಯ ಹಾಗೂ ಗೃಹರಕ್ಷಕ ದಳದ ಸುಮಾರು 50 ಮಂದಿ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಸಂಜೆ 6 ಗಂಟೆಯವರೆಗೆ ಆರ್‌ಟಿಪಿಸಿಆರ್ ಪರೀಕ್ಷೆಗೆ 140 ಮಂದಿಯ ಮತ್ತು ಆಂಟಿಜನ್ ಪರೀಕ್ಷೆಗೆ 30 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ.


ಡೆಲ್ಟಾ ಪ್ಲಸ್ ವೇರಿಯಂಟ್ ಸೋಂಕಿತರ ಸಂಖ್ಯೆ ಕೇರಳ ಭಾಗದಲ್ಲಿ ಹೆಚ್ಚಿರುವ ಕಾರಣ ಸೋಮವಾರದಿಂದ ಜಿಲ್ಲಾಡಳಿತ ಗಡಿಭಾಗದಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ. ಮಂಗಳವಾರದಿಂದ ತಪಾಸಣೆ ಆರಂಭಗೊಂಡರೂ, ಮೂರು ದಿನ ವಿನಾಯಿತಿ ನೀಡಲಾಗಿದೆ.


'ಕೇರಳ ಹಾಗೂ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಬರುವ ಪ್ರಯಾಣಿಕರಿಂದ ಕೋವಿಡ್‌ ನೆಗೆಟಿವ್‌ ವರದಿಯನ್ನು ನಿರ್ವಾಹಕರು ಪಡೆಯುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಬಸ್‌ಗಳನ್ನು ತಪಾಸಣೆ ಮಾಡುತ್ತಿಲ್ಲ. ಉಳಿದ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ' ಎಂದು ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಪ್ರದೀಪ್ ತಿಳಿಸಿದ್ದಾರೆ


Previous Post Next Post