ಸಾಮಾನ್ಯ ಜೀವನಕ್ಕೆ ಮರಳುತ್ತಿರುವ ಫೆಲೆಸ್ತೀನೀಯರು: ತೆರೆದ ಹೊಟೇಲ್, ಅಂಗಡಿಗಳು; ಮೀನುಗಾರಿಕೆಗೆ ತೆರಳಿದ ಮೀನುಗಾರರು

💥ಸಾಮಾನ್ಯ ಜೀವನಕ್ಕೆ ಮರಳುತ್ತಿರುವ ಫೆಲೆಸ್ತೀನೀಯರು: ತೆರೆದ ಹೊಟೇಲ್, ಅಂಗಡಿಗಳು; ಮೀನುಗಾರಿಕೆಗೆ ತೆರಳಿದ ಮೀನುಗಾರರು
ಹಮಾಸ್ ಮತ್ತು ಇಸ್ರೇಲ್ ನಡುವಿನ ಭೀಕರ 11 ದಿನಗಳ ಯುದ್ಧ ಶುಕ್ರವಾರ ಯುದ್ಧವಿರಾಮದೊಂದಿಗೆ ಕೊನೆಗೊಂಡ ಬಳಿಕ, ಶನಿವಾರ ಫೆಲೆಸ್ತೀನೀಯರ ದೈನಂದಿನ ಜೀವನ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳಿದೆ.

ಅಂಗಡಿಗಳು, ಹೊಟೇಲ್ ಗಳು ತೆರೆದವು, ಹಾಗೂ ಮೀನುಗಾರರು ಸಮುದ್ರಕ್ಕೆ ತೆರಳಿದ್ದಾರೆ. ಗಾಝಾ ಪಟ್ಟಿಗೆ ನೆರವು ನಿಧಾನವಾಗಿ ಹರಿದುಬರುತ್ತಿದ್ದು, ಧ್ವಂಸಗೊಂಡ ನಗರದ ಮರುನಿರ್ಮಾಣದತ್ತ ಎಲ್ಲರ ಗಮನ ಹರಿದಿದೆ.

ರಕ್ಷಣಾ ಸಿಬ್ಬಂದಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿರಬಹುದಾದ ಮೃತದೇಹಗಳು ಅಥವಾ ಬದುಕುಳಿದವರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಮೇ 10ರಿಂದ ನಡೆದ 11 ದಿನಗಳ ಬಾಂಬ್ ದಾಳಿಯಲ್ಲಿ ಗಾಝಾ ಪಟ್ಟಿಯಲ್ಲಿ 66 ಮಕ್ಕಳು ಸೇರಿದಂತೆ 248 ಮಂದಿ ಮೃತಪಟ್ಟಿದ್ದಾರೆ ಹಾಗೂ 1,900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಸರಕಾರದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲಿ ವಾಯುದಾಳಿಯಲ್ಲಿ ಮೃತಪಟ್ಟವರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ನಾಗರಿಕರು ಎಂದು ವಿಶ್ವಸಂಸ್ಥೆ ತಿಳಿಸಿದೆ.

💥ಇಸ್ರೇಲ್ ಫೆಲೆಸ್ತೀನ್ ಯುದ್ಧ ವಿರಾಮದ ಬಳಿಕ ಗಾಝ ಪ್ರವೇಶಿಸಿದ ಪರಿಹಾರ ಟ್ರಕುಗಳು

ಇಸ್ರೇಲ್-ಫೆಲೆಸ್ತೀನ್ ಯುದ್ಧವಿರಾಮ ಜಾರಿಗೆ ಬಂದ ಬಳಿಕ, ಶುಕ್ರವಾರ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಅವುಗಳ ಭಾಗೀದಾರರಿಗಾಗಿ 13 ಟ್ರಕ್ ಸರಕು ಗಾಝಾವನ್ನು ಪ್ರವೇಶಿಸಿದೆ ಹಾಗೂ 18 ಮಿಲಿಯ ಡಾಲರ್ (ಸುಮಾರು 131 ಕೋಟಿ ರೂಪಾಯಿ) ನೆರವನ್ನು ಒದಗಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸಾಮಗ್ರಿಗಳು, ಕೋವಿಡ್-19 ಲಸಿಕೆಗಳು, ವೈದ್ಯಕೀಯ ಸಲಕರಣೆಗಳು ಮತ್ತು ಔಷಧವನ್ನು ಹೊತ್ತ ವಾಹನಗಳು ಕೆರೆಮ್ ಶಾಲಮ್ ಗಡಿದಾಟು ಮೂಲಕ ಗಾಝಾ ಪ್ರವೇಶಿಸಿದವು ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

📡
أحدث أقدم