ದೇಶದ ಎಲ್ಲಾ ಜನರಿಗೂ ಕೇಂದ್ರದಿಂದ ಉಚಿತ ಕೊವಿಡ್ ಲಸಿಕೆ: ಪ್ರಧಾನಿ ಮೋದಿ

ದೇಶದ ಎಲ್ಲಾ ಜನರಿಗೂ ಕೇಂದ್ರದಿಂದ ಉಚಿತ ಕೊವಿಡ್ ಲಸಿಕೆ: ಪ್ರಧಾನಿ ಮೋದಿ


ನವದೆಹಲಿ: ಕರೊನಾ ನಿಯಂತ್ರಣದಲ್ಲಿ ಲಸಿಕೆಯ ಪಾತ್ರ ಪ್ರಮುಖವಾದದ್ದು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ಲಸಿಕೆ ವಿತರಣೆ ಸಂಬಂಧ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಲಸಿಕೆ ವಿರುದ್ಧ ನಡೆಯುತ್ತಿರುವ ಟೀಕೆಗಳಿಗೆ ಉತ್ತರವನ್ನೂ ಕೊಟ್ಟ ಪ್ರಧಾನಿ, ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ ಲಸಿಕೆ ವಿತರಣೆಯ ಪೂರ್ತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊರಲಿದ್ದು, ಇನ್ನೆರಡು ವಾರದಲ್ಲಿ ಆ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು.


ಸದ್ಯದಲ್ಲೇ ದೇಶದ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಉಚಿತವಾಗಿಯೇ ಲಸಿಕೆಯನ್ನು ನೀಡಲಿದೆ. ಲಸಿಕೆಗಾಗಿ ಯಾವುದೇ ರಾಜ್ಯವೂ ಕೇಂದ್ರಕ್ಕೆ ಹಣ ನೀಡಬೇಕಾಗಿಲ್ಲ ಎಂದಿರುವ ಪ್ರಧಾನಿ, ಅಂತಾರಾಷ್ಟ್ರೀಯ ಯೋಗದಿನವಾದ ಜೂ. 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. ಬೇರೆ ವಯೋಮಾನದವರಿಗೆ ಈಗಾಗಲೇ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಯಾವುದೇ ಭೇದಭಾವ ಪರಿಗಣಿಸದೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಉಚಿತವಾಗಿ ಲಸಿಕೆ ಪಡೆಯಲು ಇಚ್ಛೆ ಇರದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಸಿಗಲಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಬಾಬ್ತು 150 ರೂಪಾಯಿ ಸೇವಾಶುಲ್ಕ ಮಾತ್ರ ಪಡೆಯಬಹುದು. ಇನ್ನು ಬಡಜನರಿಗೆ ನೀಡಲಾಗುತ್ತಿರುವ ಉಚಿತ ಪಡಿತರ ದೀಪಾವಳಿವರೆಗೂ ಮುಂದುವರಿಯಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

Previous Post Next Post