ಕೊಡಗಿನಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಕೆ, ಮಂಜಿನ ನಗರಿಗೆ ಸದ್ಯಕ್ಕಿಲ್ಲ 3.O ಅನ್ ಲಾಕ್ ಭಾಗ್ಯ
ಮಡಿಕೇರಿ: ಇಡೀ ರಾಜ್ಯವೇ ಅನ್‌ಲಾಕ್ ಆಗುತ್ತಿದ್ದರೆ, ಸೋಮವಾರದ ಬಳಿಕವೂ ಕೊಡಗು ಜಿಲ್ಲೆ ಮಾತ್ರ ಲಾಕ್‌ಡೌನ್ ಸ್ಥಿತಿಯಲ್ಲಿಯೇ ಇರಲಿದೆ. ಪಾಸಿಟಿವ್ ದರ ಇಳಿಕೆಯಾಗದ ಕಾರಣ ಲಾಕ್‌ಡೌನ್ ಮುಂದುವರಿಸಲಾಗಿದೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, 'ಕೊಡಗಿನಲ್ಲಿ ಸ್ವಲ್ಪ ಸಮಸ್ಯೆಯಾಗಿದ್ದು ಲಾಕ್‌ಡೌನ್ ತೆರವು ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿ ಜಿಲ್ಲಾಡಳಿತ ಅನ್‌ಲಾಕ್ ನಿರ್ಧಾರ ಕೈಗೊಳ್ಳಲಿದೆ. ಸದ್ಯಕ್ಕೆ ಅಲ್ಲಿ ಯಾವುದೇ ನಿಯಮ ಸಡಿಲಿಕೆ ಇಲ್ಲ' ಎಂದು ಮಾಹಿತಿ ನೀಡಿದ್ದರು.
ಕೊಡಗಿನಲ್ಲಿ ಪಾಸಿಟಿವ್ ದರ ಶೇ 6.5ರಷ್ಟಿದೆ. ಪ್ರಕರಣಗಳೂ ಇಳಿಕೆ ಆಗುತ್ತಿಲ್ಲ. ಪಾಸಿಟಿವ್ ದರವು ಶೇ 5ಕ್ಕಿಂತ ಕಡಿಮೆಯಾದ ಮೇಲೆ ನಿಯಮ ಸಡಿಲಿಕೆ ಸೂಕ್ತವೆಂದು ಈ ಹಿಂದೆ ನಡೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ, ಇಂದು ಭಾನುವಾರ ಸ್ಪಷ್ಟ ಮಾರ್ಗಸೂಚಿಗಳು ಹೊರಬೀಳುವ ಸಾಧ್ಯತೆಯಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ, ಜಿಲ್ಲಾಧಿಕಾರಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖರೀದಿಗೆ ಹೆಚ್ಚುವರಿ ಸಮಯ?: ಸದ್ಯದ ಸ್ಥಿತಿಯಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿತ್ತು. ಇದೀಗ ಸೋಮವಾರದಿಂದ ಶುಕ್ರವಾರದ ತನಕ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯ ತನಕ ಖರೀದಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಮಡಿಕೇರಿಯಲ್ಲಿ ಶನಿವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪ್ರತಿಕ್ರಿಯಿಸಿ, ಪ್ರತಿನಿತ್ಯ ಸೋಂಕಿತರ ಪ್ರಮಾಣ ಏರುಪೇರಾಗುತ್ತಿದೆ. ಪಾಸಿಟಿವ್ ದರವು ಶೇ 6.5ರಷ್ಟಿದೆ. ಜಿಲ್ಲೆಯ ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ, ಲಾಕ್‌ಡೌನ್ ಮುಂದುವರಿಸುತ್ತೇವೆ ಎಂದಿದ್ದರು.
ಪ್ರಾಕೃತಿಕ ವಿಕೋಪ, ಲಾಕ್‌ಡೌನ್... ಹೀಗೆ ಕೊಡಗಿನಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಇನ್ನೂ ಎಷ್ಟು ದಿನ ಇದೇ ಆತಂಕ, ನಷ್ಟದಲ್ಲಿ ಕಾಲಕಳೆಯುವುದು ಎಂದು ಹೋಂಸ್ಟೇ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.