ಪ್ರತಿದಿನ 200ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗುತ್ತಿವೆ. ಮಾರ್ಗಸೂಚಿಗಳ ಅನುಸಾರ ತರಗತಿಗಳನ್ನು ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿ, ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸುವುದು ಸೂಕ್ತ ಎಂದು ತಿಳಿದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 1ರಿಂದ ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಕಾರ್ಯಾಚರಣಾ ವಿಧಾನ (SOP) ಯನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ವಹಿಸಲಾಗಿದೆ.
ಕೇರಳ ರಾಜ್ಯದಿಂದ ಬರುವಂತಹ ವಿದ್ಯಾರ್ಥಿಗಳನ್ನು 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲು ಹಾಗೂ ಕೋವಿಡ್ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೆ ವೈದ್ಯಕೀಯ ಆರೈಕೆ ಕಲ್ಪಿಸಲು ಅನುಕೂಲವಾಗುವಂತೆ ವಸತಿ ಸಹಿತ ಕಾಲೇಜುಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಪ್ರಶಸ್ತವಾದ ಸಕಲ ವ್ಯವಸ್ಥೆಯುಳ್ಳ ಕೋವಿಡ್ ಕೇರ್ ಸೆಂಟರ್‌ಗಳನ್ನು ಕಡ್ಡಾಯವಾಗಿ ತೆರೆಯಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಕ್ವಾರಂಟೈನ್ ನಲ್ಲಿರಿಸಿದ ವಿದ್ಯಾರ್ಥಿಗಳು 7 ದಿನಗಳ ನಂತರ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ, ನೆಗಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಕ್ವಾರೆಂಟೈನ್ ನಲ್ಲಿರಿಸಿದ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್ ನಿಂದಲೇ ಆನ್ ಲೈನ್ ತರಗತಿಯಲ್ಲಿ ಭಾಗವಹಿಸುವಂತೆ ಕ್ರಮ ವಹಿಸಲು ಆದೇಶ ನೀಡಲಾಗಿದೆ.
ಕೇರಳ ರಾಜ್ಯದಿಂದ ದಿನಂಪ್ರತಿ ಬರುವಂತಹ ವಿದ್ಯಾರ್ಥಿಗಳು ಪ್ರತಿ 7 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ, ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು. ಕೇರಳ ರಾಜ್ಯದಿಂದ ದಿನಂಪ್ರತಿ ಬರುವಂತಹ ಬೋಧಕ ಬೋಧಕೇತರ ಸಿಬ್ಬಂದಿಗಳು ಕೋವಿಡ್ ಲಸಿಕೆ (2 ಡೋಸ್) ಪಡೆದಿದ್ದರೂ ಕೂಡಾ ಪ್ರತಿ 7 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.
ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ, ನೆಗಟಿವ್ ಪ್ರಮಾಣ ಪತ್ರದೊಂದಿಗೆ ಕಾಲೇಜಿಗೆ ಹಾಜರಾಗಬೇಕಿದೆ. ಇದರ ಜೊತೆಗೆ ವಸತಿ ನಿಲಯದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸುವಂತೆ ಆದೇಶಿಸಲಾಗಿದೆ.
ಸರಕಾರದ ಪ್ರಮಾಣಿತ ಕಾರ್ಯಾಚರಣಾ ವಿಧಾನವು ಪರಿಪಾಲನೆ ಆಗುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸಲು ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಂಗಳೂರು (ಸಂಪೂರ್ಣ ಮೇಲ್ವಿಚಾರಣೆ), ತಾಲೂಕು ಆರೋಗ್ಯಾಧಿಕಾರಿಗಳು, ಕಾಲೇಜು ಪ್ರಾಂಶುಪಾಲರುಗಳು ಒಳಗೊಂಡ ಪರಿಶೀಲನಾ ತಂಡವನ್ನು ರಚಿಸಲಾಗಿದೆ.
ಪ್ರಥಮ ಪಿಯುಸಿಗೆ ಸಂಬಂಧಿಸಿ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಮುಕ್ತಾಯವಾದ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರು ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಪಡೆದು ಸೆಪ್ಟೆಂಬರ್ 15ರಿಂದ ತರಗತಿ ಪ್ರಾರಂಭಿಸಲು ಸೂಚಿಸಲಾಗಿದೆ.
ಪದವಿ ಹಾಗೂ ಸ್ನಾತ್ತಕೋತರ ತರಗತಿ ಪ್ರಾರಂಭಕ್ಕೂ ಮುನ್ನ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಕೋವಿಡ್ ನಿಯಂತ್ರಣಕ್ಕಾಗಿ ಅಳವಡಿಸಿಕೊಳ್ಳಲಾದ ಪೂರ್ವ ತಯಾರಿ ಹಾಗೂ ಮುಂದಿನ ಯೋಜನೆಯೊಂದಿಗೆ ಜಂಟಿ ನಿರ್ದೇಶಕರು ಇಲಾಖೆಯವರಿಗೆ ಅರ್ಜಿ ಸಲ್ಲಿಸಿ ಸರ್ವಾನುಮತಿ ಪಡೆದು ಸಪ್ಟೆಂಬರ್ 15 ರಿಂದ ಕಾಲೇಜು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
eeeginasuddii.in