ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಗೆ ಸಿಎಂ ಸೂಚನೆ

ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಗೆ ಸಿಎಂ ಸೂಚನೆ 


ಬೆಂಗಳೂರು: ಕೋವಿಡ್ 19 ಸೋಂಕು ಹರಡುವಿಕೆ ತಡೆಯುವ ಕಾರಣದಿಂದ ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು


ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್, ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು.


ಸಭೆಯ ಬಳಿಕ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಪ್ಯೂ ಜಾರಿ ಮಾಡಲಾಗುವುದು.‌ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಅವಧಿ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಜಾರಿಯಾಗಲಿದೆ ಎಂದರು.  


(ಗಡಿ ಜಿಲ್ಲೆಗಳು: ಕಲಬುರಗಿ, ಮೈಸೂರು, ಚಾಮರಾಜನಗರ, ವಿಜಯಪುರ, ಬೆಳಗಾವಿ, ಬೀದರ್, ದಕ್ಷಿಣ ಕನ್ನಡ ಹಾಗೂ ಕೊಡಗು)


ಆಗಸ್ಟ್ 23 ರಿಂದ ಮೊದಲ ಹಂತದಲ್ಲಿ 9, 10,11,12 ತರಗತಿಗಳು ಆರಂಭ ಮಾಡಲಾಗುವುದು. ವಾರದಲ್ಲಿ ಎರಡು ಬ್ಯಾಚ್ ಮಾಡಿ, ದಿನಬಿಟ್ಟು ದಿನ ತರಗತಿ ನಡೆಸಲು ತೀರ್ಮಾನಿಸಲಾಗಿದೆ. ಮೂರನೆ ಅಲೆ ನೋಡಿ ಪ್ರಾಥಮಿಕ, ಹೈಸ್ಕೂಲ್ ತರಗತಿ ತೆರಯಲಾಗುವುದು. ತಜ್ಞರು ಅದಕ್ಕೆ ಸಲಹೆ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಸಚಿವರಾದ ಡಾ. ಸಿ ಎನ್ ಅಶ್ವಥ್ ನಾರಾಯಣ, ಡಾ. ಕೆ. ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ತಜ್ಞ ವೈದ್ಯರಾದ ಡಾ.ಸಿ ಎನ್ ಮಂಜುನಾಥ, ಡಾ. ಸುದರ್ಶನ್, ಡಾ. ದೇವಿಪ್ರಸಾದ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Previous Post Next Post