ಪ್ರಮಾಣ ವಚನಕ್ಕೆ ತಡ, ಶಶಿಕಲಾ ಜೊಲ್ಲೆಗೆ ಝಿರೋ ಟ್ರಾಫಿಕ್ ವ್ಯವಸ್ಥೆ

ಪ್ರಮಾಣ ವಚನಕ್ಕೆ ತಡ, ಶಶಿಕಲಾ ಜೊಲ್ಲೆಗೆ ಝಿರೋ ಟ್ರಾಫಿಕ್ ವ್ಯವಸ್ಥೆ  

ಬೆಂಗಳೂರು: ಸಿಎಂ ಬಸವರಾಜ್​ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರುವಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಯಶಸ್ವಿಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಸ ಶಶಿಕಲಾ ಜೊಲ್ಲೆ ದೆಹಲಿಯಿಂದ ನೇರವಾಗಿ ರಾಜಭವನಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಅವರ ವಿಮಾನ ಅರ್ಧ ಗಂಟೆ ಕಾಲ ವಿಳಂಬ ವಾಗಿದೆ. ಇದೇ ಹಿನ್ನಲೆ , ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ಕೆ ಅಡ್ಡಿಯಾಗದಂತೆ ಅವರಿಗಾಗಿ ಜಿರೋ ಟ್ರಾಫಿಕ್​ ವ್ಯವಸ್ಥೆ ಕಲ್ಪಿಸಲಾಗಿದೆ.


ದೆಹಲಿಯಲ್ಲಿ ಮಂತ್ರಿಸ್ಥಾನಕ್ಕಾಗಿ ಕಡೆಯ ಕ್ಷಣದವರೆಗೆ ಹೈ ಕಮಾಂಡ್​ ಮೇಲೆ ಒತ್ತಡ ಹಾಕಿದ್ದ ಶಶಿಕಲಾ ಜೊಲ್ಲೆ ಇಂದು ಬೆಳಗ್ಗೆ ದೆಹಲಿಯನ್ನು ಬಿಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ಇಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ, ಕೆಲ ಸಮಸ್ಯೆಗಳಿಂದಾಗಿ ವಿಮಾನ ಬೆಂಗಳೂರು ವಿಮಾನ ನಿಲ್ದಾಣವನ್ನು 2 ಗಂಟೆಗೆ ತಲುಪಿದೆ.


ಇದೇ ಹಿನ್ನಲೆ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಡವಾಗಿದೆ. ದೇವನಹಳ್ಳಿಯಿಂದ ರಾಜಭವನಕ್ಕೆ ಜೀರೋ ಟ್ರಾಫಿಕ್​ ಮೂಲಕ ಆಗಮಿಸಿದರೂ ಕನಿಷ್ಠ ಅರ್ಧ ಗಂಟೆ ತಡವಾಗಲಿದೆ. ಇದೇ ಹಿನ್ನಲೆ ಅವರನ್ನು ಹೊರತು ಪಡಿಸಿ ಉಳಿದ ಸಚಿವರು ಸದ್ಯ ಪ್ರಮಾಣ ವಚನ ಸ್ವೀಕಾರ ಕಾರ್ಯ ಮಾಡುತ್ತಿದ್ದಾರೆ. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಅವರು ಬರಲಿದ್ದಾರೆ. 28 ಜನರ ಪ್ರಮಾಣ ವಚನ ಮುಗಿಯುವ ಹೊತ್ತಿಗೆ ಅವರು ಬರಲಿದ್ದು, ಬಳಿಕ ಅವರಿಗೆ ಪ್ರಮಾಣ ವಚನ ಸ್ವೀಕಾರ ನಡೆಸಲು ಅವಕಾಶ ಕಲ್ಪಿಸಲಾಯಿತು. 2.40ರ ಸುಮಾರಿಗೆ ರಾಜಭವನ ತಲುಪಿದ ಅವರು ಬಳಿಕ ಪ್ರಮಾಣ ವಚನ ಸ್ವೀಕಾರ ಮಾಡಿದರು.


ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕೈ ಬಿಡಲಾಗುತ್ತದೆ ಎಂಬ ಮಾತು ದಟ್ಟವಾಗಿತ್ತು. ಶಶಿಕಲಾ ಜೊಲ್ಲೆ ಬದಲು ಹಿರಿಯೂರು ಶಾಸಕಿ ಪೂರ್ಣಿಮಾ ಬೊಮ್ಮಾಯಿ ಸಂಪುಟ ಸೇರಲಿದ್ದಾರೆ ಎನ್ನಲಾಗಿತ್ತು. ಈ ಹಿನ್ನಲೆ ದೆಹಲಿಯಲ್ಲಿಯೇ ಉಳಿದ ಶಶಿಕಲಾ ಜೊಲ್ಲೆ ಬಿಎಲ್​ ಸಂತೋಷ್​ ಮೂಲಕ ಹೈ ಕಮಾಂಡ್​ ಮೇಲೆ ಒತ್ತಡ ಹಾಕಿ, ಮತ್ತೊಮ್ಮೆ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.


ಬೊಮ್ಮಾಯಿ ಸಂಪುಟ ಸೇರಿರುವ ಏಕೈಕ ಮಹಿಳೆ ಇವರಾಗಿರುವ ಹಿನ್ನಲೆ ಹಿಂದಿನ ಖಾತೆಯೇ ಅವರಿಗೆ ಸಿಗಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ.
Previous Post Next Post