ಈ ವರ್ಷದಿಂದ ಹಳೇ ರೀತಿಯಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ, ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲು ಮಂಡಳಿ ನಿರ್ಧಾರ


ಈ ವರ್ಷದಿಂದ ಹಳೇ ರೀತಿಯಲ್ಲೇ ಎಸ್ಸೆಸ್ಸೆಲ್ಸಿ  ಪರೀಕ್ಷೆ, ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲು ಮಂಡಳಿ ನಿರ್ಧಾರ 

ಬೆಂಗಳೂರು (ಡಿ.17): 
ಎಸ್‌ಎಸ್‌ಎಲ್‌ಸಿ (SSLC) ಅಂತಿಮ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಟ್ಟು ಮೊದಲಿನಂತೆ ವಿವರವಾಗಿ ಉತ್ತರ ಬರೆಯುವ ಪದ್ಧತಿ ಜಾರಿಗೆ ತರಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಿರ್ಧರಿಸಿದೆ. ಈ ನಿರ್ಧಾರಕ್ಕೆ ಶಿಕ್ಷಕರ ಸಂಘಟನೆಗಳಿಂದ ಪರ-ವಿರೋಧ ವ್ಯಕ್ತವಾಗಿದೆ.


ಮೊದಲಿನಿಂದಲೂ ವಿವರವಾದ ಉತ್ತರ ಪದ್ಧತಿಯೇ ಇತ್ತು. ಆದರೆ ಕೊರೋನ ಹಿನ್ನೆಲೆಯಲ್ಲಿ 2021ರಲ್ಲಿ ಮಾತ್ರ ಬಹು ಆಯ್ಕೆ (Multiple Choice Question) ಪದ್ಧತಿಯಲ್ಲಿ ಪ್ರಶ್ನೆಗಳನ್ನು ನೀಡಲಾಗುವುದು ಎಂದು ಮಂಡಳಿ ಮೊದಲೇ ತಿಳಿಸಿತ್ತು. ಇದೀಗ ಅದರಂತೆ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನು ಕೆಲವರು ಸ್ವಾಗತಿಸಿದರೆ, ಕೆಲವರು ಒಂದೊಂದು ಪದ್ಧತಿಯಲ್ಲಿ ಮಧ್ಯ ವಾರ್ಷಿಕ ಮತ್ತು ಅಂತಿಮ ಪರೀಕ್ಷೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌, ವಿವರವಾಗಿ ಉತ್ತರ ಬರೆಯುವ ಪದ್ಧತಿಯಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟಹೆಚ್ಚುತ್ತದೆ. ಅಲ್ಲದೆ ಬರವಣಿಗೆ ಕೌಶಲ ಹಾಗೂ ಜ್ಞಾನಮಟ್ಟ ವೃದ್ಧಿಯಾಗಲಿದೆ. ಬಹು ಆಯ್ಕೆ ಪ್ರಶ್ನೆಗಳಿಂದ ವಿದ್ಯಾರ್ಥಿಗಳು ಬರೆಯುವುದನ್ನೇ ಮರೆಯುತ್ತಾರೆ ಎಂದು ವಿವರಿಸಿದರು.


ವಿಷಯದ ವಿಶ್ಲೇಷಣೆ:

ವಿವರವಾಗಿ ಉತ್ತರ ಬರೆಯುವುದರಿಂದ ವಿಷಯದ ವಿಶ್ಲೇಷಣೆ ನಡೆಸಲಾಗುತ್ತದೆ. ಹೀಗಾಗಿ ಪರೀಕ್ಷಾ ಪದ್ಧತಿಯಲ್ಲಿ ಬರವಣಿಗೆಗೆ ಒತ್ತು ನೀಡಬೇಕು. ಬಹು ಆಯ್ಕೆ ಕೈಬಿಡುವಂತೆ ಮಂಡಳಿಗೆ ಮನವಿ ಮಾಡಲಾಗಿದ್ದು, ಬದಲಾವಣೆ ತರುವುದಾಗಿ ಹೇಳಿದೆ. ಶಿಕ್ಷಕರು ಹಾಗೂ ತಜ್ಞರ ಅಭಿಪ್ರಾಯ ಪಡೆದು ಬಹು ಆಯ್ಕೆ ಪ್ರಶ್ನೆ ಪದ್ಧತಿ ಕೈಬಿಡಲಾಗಿದೆ. ಪ್ರಥಮ ಭಾಷೆಗೆ 125 ಅಂಕ ನಿಗದಿಪಡಿಸಲಾಗಿದ್ದು, ಯಾವುದೇ ಆಂತರಿಕ ಪರೀಕ್ಷೆ ಇರುವುದಿಲ್ಲ. ಉಳಿದ ವಿಷಯಗಳಿಗೆ 100 ಅಂಕ ನಿಗದಿ ಮಾಡಿದ್ದು, ಇದರಲ್ಲಿ 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.


ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಇದಕ್ಕೆ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೋನಾ ಭೀತಿ ಇರುವುದರಿಂದ ಈಗಾಗಲೇ ಪೂರೈಸಲಾಗಿರುವ ಸಿಲೆಬಸ್‌ ಆಧಾರದಲ್ಲಿ ಮೊದಲು ಮಧ್ಯ ವಾರ್ಷಿಕ ಪರೀಕ್ಷೆಯನ್ನು ಬಹು ಆಯ್ಕೆ ಪದ್ಧತಿಯಂತೆ ನಡೆಸಲಿ. ಅಂತಿಮ ಪರೀಕ್ಷೆಯನ್ನು ವಿವರವಾದ ಉತ್ತರ ಪದ್ಧತಿಯಂತೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.



أحدث أقدم