ಪಾದಯಾತ್ರೆ ಮಾಡಿಯೇ ತೀರುತ್ತೇವೆ: ಡಿಕೆಶಿ ಸರಕಾರದ ಆದೇಶಕ್ಕೆ ಸಡ್ಡು ಹೊಡೆಯಲು ಕಾಂಗ್ರೆಸ್ ತೀರ್ಮಾನ

ಪಾದಯಾತ್ರೆ ಮಾಡಿಯೇ ತೀರುತ್ತೇವೆ: ಡಿಕೆಶಿ 
ಸರಕಾರದ ಆದೇಶಕ್ಕೆ ಸಡ್ಡು ಹೊಡೆಯಲು ಕಾಂಗ್ರೆಸ್ ತೀರ್ಮಾನ


ಬೆಂಗಳೂರು:
 'ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ತಡೆಯಲಾಗದಷ್ಟು ಸರ್ಕಾರ ಅಸಮರ್ಥವಾಗಿದೆಯೇ' ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ, ಪಾದಯಾತ್ರೆ ಹಾಗೂ ಆ ಉದ್ದೇಶಕ್ಕಾಗಿ ಸಾಗುವ ಜನ ಮತ್ತು ವಾಹನಗಳ ಓಡಾಟ ನಿಷೇಧಿಸಿ ರಾಜ್ಯ ಸರ್ಕಾರ ಬುಧವಾರ ರಾತ್ರಿ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, 'ನಿಗದಿತ ಅವಧಿಯ ಯಾತ್ರೆಯನ್ನು ಮಧ್ಯದಲ್ಲೇ ಕೈಬಿಡುವ ಪ್ರಶ್ನೆಯೇ ಇಲ್ಲ. ಮುಂದುವರಿಸಿಯೇ ತೀರುತ್ತೇವೆ' ಎಂದು ಹೇಳಿದ್ದಾರೆ.


ನಿಷೇಧದ ಆದೇಶಕ್ಕೆ ಕಾಂಗ್ರೆಸ್ ಸಡ್ಡು ಹೊಡೆದಿರುವುದರಿಂದಾಗಿ, ಗುರುವಾರ ರಾಮನಗರದಿಂದ ಬೆಂಗಳೂರು ಕಡೆಗೆ ಸಾಗಬೇಕಿರುವ ಯಾತ್ರೆ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ.


ಸರ್ಕಾರದ ಆದೇಶವೇನು?: 'ನಮ್ಮ ನೀರು ನಮ್ಮ ಹಕ್ಕು ಅಥವಾ ಮೇಕೆದಾಟು ಪಾದಯಾತ್ರೆ' ಹೀಗೆ ಯಾವುದೇ ಹೆಸರಿನಲ್ಲಿ ಅಂತರ್ ಜಿಲ್ಲೆ ಮತ್ತು ರಾಮನಗರ ಜಿಲ್ಲೆಯೊಳಗೆ ವಾಹನಗಳು ಹಾಗೂ ಜನರ ಓಡಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ' ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.


ಮುಂದಿನ ಆದೇಶದವರೆಗೆ ವಾಹನಗಳ ಓಡಾಟ ಮತ್ತು ಜನರ ಸಾಗಣೆಗೆ ನಿರ್ಬಂಧಿಸಲು ಜಿಲ್ಲಾಧಿಕಾರಿಗಳು, ಎಸ್ಪಿಗಳು, ಪೊಲೀಸ್‌ ಕಮಿಷನರ್‌ ಮತ್ತು ಸಾರಿಗೆ ಆಯುಕ್ತರು ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಯಾವುದೇ ವ್ಯಕ್ತಿ ನಿಯಮವನ್ನು ಉಲ್ಲಂಘಿಸಿದರೆ, ವಿಕೋಪ ನಿರ್ವಹಣೆ ಕಾಯ್ದೆ 2005 ರ ಸೆಕ್ಷನ್‌ 51 ಮತ್ತು 60 ರ ಅಡಿ ಹಾಗೂ ಐಪಿಸಿ 188 ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


ಕೊರೊನಾ ಸೋಂಕು ಹರಡುವಿಕೆಯ ಸರಪಳಿ ತುಂಡರಿಸುವ ಉದ್ದೇಶದಿಂದ ಈಗಾಗಲೇ, ಪ್ರತಿಭಟನೆ, ರ್‍ಯಾಲಿ, ಹೆಚ್ಚಿನ ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಹೀಗಿದ್ದರೂ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಲು ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆದುಕೊಂಡು ಬರಲಾಗುತ್ತಿದೆ. ಇದರಿಂದ ರಾಜ್ಯದ ಅಪಾರ ಸಂಖ್ಯೆಯ ಜನರ ಆರೋಗ್ಯವನ್ನು ಅಪಾಯಕ್ಕೆ ಒಡ್ಡಲಾಗಿದೆ. ಅಲ್ಲದೆ, ಕೋವಿಡ್‌ ಪರಿಸ್ಥಿತಿಯೂ ಬಿಗಡಾಯಿಸಲಿದೆ ಎಂದು ಅವರು ಆದೇಶದಲ್ಲಿ ವಿವರಿಸಿದ್ದಾರೆ.


ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ, ಸರ್ಕಾರ ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವರ್ಚುವಲ್ ರೂಪದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಭಾಗಿಯಾಗಿದ್ದರು.

أحدث أقدم