ದಿಗ್ಭಂಧನದಲ್ಲಿ ರಷ್ಯಾ: ಉಕ್ರೇನ್ ಮೇಲೆ ದಾಳಿಗೆ ಸಜ್ಜು, ಐರೋಪ್ಯ ರಾಷ್ಟ್ರಗಳಿಂದ ನಿರ್ಬಂಧ

ದಿಗ್ಭಂಧನದಲ್ಲಿ ರಷ್ಯಾ: ಉಕ್ರೇನ್ ಮೇಲೆ ದಾಳಿಗೆ ಸಜ್ಜು, ಐರೋಪ್ಯ ರಾಷ್ಟ್ರಗಳಿಂದ ನಿರ್ಬಂಧ 


ಮಾಸ್ಕೋ/ವಾಷಿಂಗ್ಟನ್‌: ಉಕ್ರೇನ್‌ಗೆ ಸೇರಿದ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ರಷ್ಯಾ ಘೋಷಿಸುತ್ತಿದ್ದಂತೆ, ಅಮೆರಿಕ ಸಹಿತ ಐರೋಪ್ಯ ದೇಶಗಳು ರಷ್ಯಾದ ಮೇಲೆ ದಿಗ್ಬಂಧನ ಹೇರಿವೆ.


ಉಕ್ರೇನ್‌ನ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ದೊನೆಸ್ಕ್ ಮತ್ತು ಲುಹಾನ್ಸ್ಕ್ ಗಳನ್ನು ಸ್ವತಂತ್ರ ಪ್ರದೇಶಗಳು ಎಂದು ರಷ್ಯಾ ಘೋಷಿಸಿರುವ ಕ್ರಮಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದೆ.


ಉಕ್ರೇನ್‌ ಅನ್ನು ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ರಷ್ಯಾ ತೆಗೆದುಕೊಂಡ ಮೊದಲ ಕ್ರಮ ಎಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ಅಮೆರಿಕ, ಕೆನಡಾ, ಬ್ರಿಟನ್‌, ಆಸ್ಟ್ರೇಲಿಯಾ, ಜಪಾನ್‌ ಹಾಗೂ ಐರೋಪ್ಯ ದೇಶಗಳು ರಷ್ಯಾ ವಿರುದ್ಧ ದಿಗ್ಬಂಧನ ಹೇರಿವೆ.


ಈ ಮಧ್ಯೆ ರಷ್ಯಾ ಗಡಿಗೆ ಹೊಂದಿಕೊಂಡಂತಿರುವ ನ್ಯಾಟೋ ದೇಶಗಳಿಗೆ ಅಮೆರಿಕ ಇನ್ನಷ್ಟು ಸೇನೆಯನ್ನು ಕಳುಹಿಸಿದೆ. ರಷ್ಯಾ ಸೇನೆಯೂ ಪ್ರತ್ಯೇಕತಾವಾದಿಗಳ ವಶದಲ್ಲಿರುವ ಉಕ್ರೇನ್‌ ಭಾಗಕ್ಕೆ ಪ್ರವೇಶಿಸಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಿಳಿದುಬಂದಿದೆ.


ಯುದ್ಧ ಭೀತಿ: ಉಕ್ರೇನ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ 


ಕೀವ್‌: ರಷ್ಯಾದಿಂದ ಆಕ್ರಮಣ ಭೀತಿ ಹೆಚ್ಚಿದ ಬೆನ್ನಲ್ಲೇ ಉಕ್ರೇನ್ ತುರ್ತು ಪರಿಸ್ಥಿತಿ ಘೋಷಿಸಿದೆ. ಇದು ಫೆಬ್ರುವರಿ 24ರಿಂದ ಜಾರಿಗೆ ಬರಲಿದ್ದು, 30 ದಿನಗಳವರೆಗೆ ಜಾರಿಯಲ್ಲಿರಲಿದೆ.


ರಕ್ಷಣೆಗಾಗಿ ಸೇನಾ ಮೀಸಲು ಪಡೆಗಳನ್ನು ಒಗ್ಗೂಡಿಸುತ್ತಿರುವ ಉಕ್ರೇನ್, ರಷ್ಯಾದಲ್ಲಿರುವ ನಾಗರಿಕರು ತಕ್ಷಣವೇ ಸ್ವದೇಶಕ್ಕೆ ವಾಪಸಾಗುವಂತೆ ಸೂಚಿಸಿದೆ.


ಈ ಮಧ್ಯೆ, ಪೂರ್ವ ಉಕ್ರೇನ್‌ನಲ್ಲಿ ಬಂಡುಕೋರರ ಹಿಡಿತದಲ್ಲಿರುವ ಎರಡು ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೇನೆಯ 2 ಲಕ್ಷಕ್ಕೂ ಹೆಚ್ಚು ಮೀಸಲು ಸಿಬ್ಬಂದಿಗೆ ಕರ್ತವ್ಯಕ್ಕೆ ಮರಳಲು ಸೂಚಿಸಿದ್ದಾರೆ. ಈ ಬೆಳವಣಿಗೆಗಳು ಉದ್ವಿಗ್ನತೆಯನ್ನು ಹೆಚ್ಚಿಸಿವೆ.

أحدث أقدم