ಖುರ್-ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಮಿಗೆ ಭಾರಿ ಹಾನಿಯುಂಟಾಗಿದೆ: ಡಾ. ಝೈನಿ ಕಾಮಿಲ್

ಖುರ್-ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಮಿಗೆ ಭಾರಿ ಹಾನಿಯುಂಟಾಗಿದೆ: ಡಾ. ಝೈನಿ ಕಾಮಿಲ್  


ಚಿಕ್ಕಮಗಳೂರು: ಇಸ್ಲಾಂನ ಪವಿತ್ರ ಧರ್ಮ ಗ್ರಂಥವಾಗಿರುವ ಖುರ್‌ಆನ್ ದೈವಿಕ ವಚನಗಳ ಸಂಗ್ರಹವಾಗಿದ್ದು ಮಾನವನ ಜೀವನ ಕ್ರಮದ ಸಮಗ್ರ ಮಾರ್ಗದರ್ಶನವಾಗಿರುತ್ತದೆ ಎಂದು ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ತಿಳಿಸಿದ್ದಾರೆ.


ಚಿಕ್ಕಮಗಳೂರು ಜಿಲ್ಲೆಯ ಕಳಸ ಜುಮಾ ಮಸೀದಿಯಲ್ಲಿ ಶುಕ್ರವಾರದ ಜುಮಾ ಪ್ರಾರ್ಥನೆಯ ಬಳಿಕ ನಡೆಸಿದ ರಮಝಾನ್ ಪ್ರವಚನದಲ್ಲಿ ಅವರು ಮಾತನಾಡುತ್ತಿದ್ದರು.


ಇತ್ತೀಚೆಗೆ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬರು ಕುರ್‌ಆನಿನ ಕೆಲವು ಆಯತ್ (ಶ್ಲೋಕ)ಗಳನ್ನು ತೆಗೆದು ವಿವರಿಸುತ್ತಾ ಜಗತ್ತಿನಾದ್ಯಂತ ಮುಸ್ಲಿಮರು ಭಯೋತ್ಪಾದಕರಾಗಲು ಕುರ್‌ಆನಿನ ಸಂದೇಶಗಳೇ ಕಾರಣ ಎನ್ನುವ ರೀತಿಯಲ್ಲಿ ಮಾತನಾಡಿದ್ದನ್ನು ಉಲ್ಲೇಖಿಸಿ ಅವರು ಸದರಿ ಆಯತ್‌ಗಳ ಹಿನ್ನೆಲೆಗಳನ್ನು ವಿವರಿಸಿ ಭಾಷಣ ಮಾಡುತ್ತಿದ್ದರು.


ಯಾರೋ ಬರೆದುಕೊಟ್ಟ ಚೀಟಿಯನ್ನು ಓದುತ್ತಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕುರ್‌ಆನ್ ಕುರಿತು ಅಪಾಯಕಾರಿಯಾದ ರೀತಿಯಲ್ಲಿ ಮಾತನಾಡಿದ್ದಾರೆ. ವಾಸ್ತವದೊಂದಿಗೆ ಅವುಗಳಿಗೆ ಯಾವುದೇ ಹೊಂದಾಣಿಕೆ ಇಲ್ಲ.‌


ಪ್ರವಾದಿ ಮುಹಮ್ಮದ್ (ಸ) ಅವರು ಇಪ್ಪತ್ತಮೂರು ವರ್ಷಗಳ ಕಾಲ ತಮ್ಮ ಜೀವನ ಮತ್ತು ಬೋಧನೆಗಳ ಮೂಲಕ ಕುರ್‌ಆನ್‌ ಅನ್ನು ಜಗತ್ತಿಗೆ ವಿವರಿಸಿ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಸುಮಾರು ಇಪ್ಪತ್ತೈದು ಲಕ್ಷದಷ್ಟು ಹದೀಸ್‌ಗಳು (ಪ್ರವಾದಿ (ಸ) ರವರ ನಡೆ-ನುಡಿಗಳು) ದಾಖಲಿಸಲ್ಪಟ್ಟಿವೆ. ಕುರ್‌ಆನ್ ಗ್ರಂಥದ ಮೊಟ್ಟಮೊದಲ ಸೂಕ್ತವೇ (ಆಯತ್) ಅಲ್ಲಾಹನು ಪರಮ ದಯಾಳು ಮತ್ತು ಕರುಣಾಮಯಿ ಎಂಬ ಆಶಯದೊಂದಿಗೆ ಶುರುವಾಗುತ್ತದೆ. ಕಟ್ಟಕಡೆಯ ಅಧ್ಯಾಯದ ಹೆಸರು 'ನಾಸ್' (ಮಾನವ) ಎಂದಾಗಿದ್ದು ಒಟ್ಟಿನಲ್ಲಿ ಕುರ್‌ಆನ್, ಮಾನವತೆಯ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸುವ ಶ್ರೇಷ್ಠ ಗ್ರಂಥವಾಗಿದೆ ಎಂದು ಅವರು ವಿವರಿಸಿದರು.


ಆದರೆ ಪ್ರವಾದಿ ಮುಹಮ್ಮದ್ (ಸ) ಅವರ ಆಗಮನದ ಮೊದಲ ಹಂತಗಳಲ್ಲಿ ಸ್ಥಳೀಯ ವೈರಿಗಳಿಂದ ಎದುರಾದ ಭಾರೀ ವಿರೋಧಗಳು ಕೆಲವೊಮ್ಮೆ ಯುದ್ಧಗಳಲ್ಲಿ ಕೊನೆಗೊಂಡದ್ದು ಹೌದು. ಅವು ಸಾಮಾನ್ಯವಾಗಿ ಎಲ್ಲ ಮತಗಳಿಲ್ಲಯೂ ನಡೆದಿರುವಂತೆ ಧರ್ಮ-ಅಧರ್ಮಗಳ ನಡುವಿನ ಯುದ್ಧವಾಗಿತ್ತು. ಅಲ್ಲದೆ ಇಸ್ಲಾಮನ್ನು ವಿರೋಧಿಸುವ ಸರ್ವರನ್ನೂ ಎಲ್ಲ ಕಾಲಗಳಲ್ಲಿಯೂ ಸದೆ ಬಡಿಯುವಂತೆ ಪ್ರೇರೇಪಿಸುವ ಭಯೋತ್ಪಾದಕ ಸಂದೇಶಗಳು ಅಲ್ಲ. ಈ ಕುರಿತು ಸಿ.ಟಿ ರವಿ ಅವರು ಉಲ್ಲೇಖಿಸಿದ ಆಯತ್‌ಗಳು ಅಂದಿನ ಕಾಲಕ್ಕೆ ಮಾತ್ರ ಸೀಮಿತವಾಗಿದ್ದ ಸಾಂದರ್ಭಿಕ ಹಿನ್ನೆಲೆಯ ಸನ್ನಿವೇಶಗಳ ಪ್ರತಿಬಿಂಬವಾಗಿತ್ತು.


ಪ್ರವಾದಿ ಮುಹಮ್ಮದ್ (ಸ) ಅವರು ಅನಂತರ ಹದಿಮೂರು ವರ್ಷಗಳ ಕಾಲ ಮದೀನಾ ಕೇಂದ್ರವಾಗಿ ನಡೆಸಿದ ಆಳ್ವಿಕೆಯಲ್ಲಿ ಸರ್ವ ಜನಾಂಗದವರಿಗೂ ಶಾಂತಿಯುತ ಬದುಕಿಗೆ ಮಾಡಿಕೊಟ್ಟ ಅವಕಾಶ, ಮುಸ್ಲಿಮೇತರರಿಗೆ ಯಾವುದೇ ತೊಂದರೆ ಕೊಟ್ಟವರಿಗೆ ನೀಡಿದ ಬಲವಾದ ತಾಕೀತು, ಯಾವುದೇ ವರ್ಗದೊಂದಿಗಿನ ಭಿನ್ನಮತ ಅವರೊಂದಿಗೆ ಸಂಘರ್ಷಕ್ಕೆ ಇಳಿಯಲು ನಿಮಗೆ ಪ್ರೇರಣೆ ಆಗಬಾರದು ಎನ್ನುವ ಆದೇಶ ಇದೆಲ್ಲವೂ ಕುರ್‌ಆನ್ ಯಾವ ಸಂದೇಶಗಳನ್ನು ಪ್ರತಿನಿಧಿಸುತ್ತದೆ ಎಂಬುದರ ದ್ಯೋತಕವಾಗಿದೆ.


ಕುರ್‌ಆನ್ ಶ್ಲೋಕಗಳ ಅವತೀರ್ಣದ ಹಿನ್ನೆಲೆಗಳ ಕುರಿತು ಸರಿಯಾದ ಅಂದಾಜು ಇಲ್ಲದ‌ ಕೆಲವರು, ಕುರ್‌ಆನ್ ವ್ಯಾಖ್ಯಾನ ಎಂಬ ಹೆಸರಲ್ಲಿ ಬರೆದಿಟ್ಟ ದುರ್ವ್ಯಾಖ್ಯಾನಗಳೇ ಇಂತಹ ಅನಾಹುತಗಳಿಗೆ ಕಾರಣ, ಅಂತಹ ಅಪೂರ್ಣ ಭಾಷಾಂತರ ಪುಸ್ತಕಗಳನ್ನು ಎಲ್ಲರೂ ತಿರಸ್ಕರಿಸಬೇಕೆಂದು ಅವರು ಕರೆ ನೀಡಿದರು.


ಸಿ.ಟಿ.ರವಿ ಅವರು ತಾನು ಆಯತ್‌ಗಳ ಬಗ್ಗೆ ಹೇಳಿದ್ದರಲ್ಲಿ ತಪ್ಪು ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದು ಅಭಿನಂದನಾರ್ಹವಾಗಿದ್ದು, ಇಂತಹ ಆಯತ್‌ಗಳ ಬಗ್ಗೆ ಸಿಟಿ ರವಿ ಸಮೇತ ಯಾವುದೇ ವ್ಯಕ್ತಿಗಳೊಂದಿಗೆ ಸಂವಾದ- ಮಾತುಕತೆ ನಡೆಸಲು ತಾನು ಸಿದ್ಧ ಎಂದು ಡಾ. ಝೈನೀ ಕಾಮಿಲ್ ತಿಳಿಸಿದ್ದಾರೆ.

أحدث أقدم