ದೇಶವೇ ಬೆಚ್ಚಿ ಬಿದ್ದ ಮಂಗಳೂರು ವಿಮಾನ ಮಹಾದುರಂತಕ್ಕೆ ಹನ್ನೆರಡು ವರ್ಷ

ದೇಶವೇ ಬೆಚ್ಚಿ ಬಿದ್ದ ಮಂಗಳೂರು ವಿಮಾನ ಮಹಾದುರಂತಕ್ಕೆ ಹನ್ನೆರಡು ವರ್ಷ 


ಮಂಗಳೂರು: ಏರ್‌ ಇಂಡಿಯಾ ವಿಮಾನವು ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಮೇ 22ರಂದು 12 ವರ್ಷ ಪೂರ್ಣವಾಗುತ್ತಿದೆ. ದೇಶದ ನಾಗರಿಕ ವಿಮಾನಯಾನ ರಂಗದಲ್ಲಿಯೇ ಇದು ಎಂದೆಂದೂ ಮರೆಯಲಾಗದ ದುರ್ಘ‌ಟನೆ.


2010ರ ಮೇ 22ರ ಮುಂಜಾನೆ ಸಂಭವಿಸಿದ ಮಹಾದುರಂತದಲ್ಲಿ ಪೈಲಟ್‌, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ ಒಟ್ಟು 135 ಮಂದಿ ವಯಸ್ಕರು, 19 ಮಕ್ಕಳು ಮತ್ತು 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 8 ಮಂದಿ ಬದುಕುಳಿದಿದ್ದರು.


ದುಬಾೖಯಿಂದ ಮಂಗಳೂರಿಗೆ ಬಂದ ವಿಮಾನ ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಇಳಿದಿತ್ತು. ಆದರೆ ರನ್‌ವೇಯ ತುದಿಯಲ್ಲಿ ನಿಲ್ಲಬೇಕಾದ ವಿಮಾನವು ನಿಲ್ಲದೆ ಮುಂದಕ್ಕೆ ಚಲಿಸಿ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಅವನ್ನು ತುಂಡರಿಸಿ ಆಳವಾದ ಕಮರಿಗೆ ಉರುಳಿತ್ತು. ಮುಖ್ಯ ಪೈಲಟ್‌ನ ನಿರ್ಲಕ್ಷ್ಯ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದದ್ದೇ ಈ ದುರ್ಘ‌ಟನೆಗೆ ಕಾರಣ ಎಂದು ಅನಂತರ ನಡೆದ ತನಿಖೆಯಲ್ಲಿ ತಿಳಿದುಬಂದಿತ್ತು. ಬಹುತೇಕ ಶವಗಳು ಸುಟ್ಟುಕರಕಲಾಗಿದ್ದ ಕಾರಣ ಗುರುತು ಪತ್ತೆ ಅಸಾಧ್ಯವಾಗಿತ್ತು. 8 ಮಂದಿ ಅದೃಷ್ಟವಂತರು ಬದುಕುಳಿದಿದ್ದರು.


ಸ್ಮಾರಕ ಪಾರ್ಕ್‌ನಲ್ಲಿ ಇಂದು ಶ್ರದ್ಧಾಂಜಲಿ
ದುರಂತ ಸಂಭವಿಸಿದ ಸ್ಥಳದಲ್ಲೇ ಮೃತರ ಹೆಸರುಗಳನ್ನು ಶಿಲೆಯಲ್ಲಿ ಬರೆದು ತಾತ್ಕಾಲಿಕ ಸ್ಮಾರಕ ನಿರ್ಮಿಸಲಾಗಿತ್ತು. ಆದರೆ ಆ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ವಿವಾದ ಉಂಟಾಗಿತ್ತು ಹಾಗೂ ತಾತ್ಕಾಲಿಕ ಸ್ಮಾರಕವು ಕಿಡಿಗೇಡಿಗಳಿಂದಾಗಿ ಪುಡಿಯಾಗಿತ್ತು. ಅಂತಿಮವಾಗಿ 4 ವರ್ಷಗಳ ಹಿಂದೆ ಕೂಳೂರು ಸಮೀಪದ ತಣ್ಣೀರುಬಾವಿಗೆ ತೆರಳುವ ರಸ್ತೆ ಪಕ್ಕದ 90 ಸೆಂಟ್ಸ್‌ ಜಾಗದಲ್ಲಿ 22/5 ಹೆಸರಿನಲ್ಲಿ “ಸ್ಮಾರಕ ಪಾರ್ಕ್‌’ ನಿರ್ಮಿಸಲಾಗಿದೆ. ಅಲ್ಲಿ ಪ್ರತೀ ವರ್ಷ ಮೇ 22ರಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತದೆ. ರವಿವಾರ ಬೆಳಗ್ಗೆ 10.30ಕ್ಕೆ ದ.ಕ. ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ.

Previous Post Next Post