ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕೋಟೆಯ ನಾಡಿಗೆ ಕೊನೆಯ ಸ್ಥಾನ
ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಈ ಭಾರಿ ಶೇ.61.88 ಫಲಿತಾಂಶ ಬಂದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಖಡವಾರು ಫಲಿತಾಂಶದಲ್ಲಿ 0.8 ಹೆಚ್ಚಾಗಿದೆ.
ಶನಿವಾರ ಬೆಳಗ್ಗೆ 11.30ಕ್ಕೆ ಮಲ್ಲೆಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶ ಬಿಡುಗಡೆ ಮಾಡಿದರು.
ಈ ಬಾರಿ ಪರೀಕ್ಷೆಗೆ 6,84,255 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಜ್ಯಾದ್ಯಂತ 1,076 ಕೇಂದ್ರಗಳಲ್ಲಿ ಏ.22ರಿಂದ ಮೇ 18ರ ವರೆಗೆ ಪರೀಕ್ಷೆ ನಡೆದಿತ್ತು. ಮಧ್ಯಾಹ್ನ 12 ಗಂಟೆ ನಂತರ https://pue.karnataka.gov.in/ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೂ ಫಲಿತಾಂಶದ ಸಂದೇಶ ಕಳುಹಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.