ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ 1983 ರ ವಿಶ್ವಕಪ್ ವಿಜೇತ ತಂಡದ ಹೀರೊ ರೋಜರ್ ಬಿನ್ನಿ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಮುಂಬೈನಲ್ಲಿ ನಡೆದ ಬಿಸಿಸಿಐ ಎಜಿಎಂನಲ್ಲಿ ಬಿನ್ನಿ ಅವರ ನೇಮಕವನ್ನು ಪ್ರಕಟಿಸಲಾಯಿತು. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಅವರ ಉತ್ತರಾಧಿಕಾರಿಯಾಗಿ ಬಿನ್ನಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ 67 ವರ್ಷದ ಬಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಲಿರುವುದರಿಂದ ಮುಂದಿನ ಪದಾಧಿಕಾರಿಗಳ ಆಯ್ಕೆ ಕೇವಲ ಔಪಚಾರಿಕವಾಗಿತ್ತು.
ಬಿನ್ನಿ ಅವರು ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈಗ ರಾಜ್ಯ ಸಂಸ್ಥೆಯಲ್ಲಿ ತಮ್ಮ ಸ್ಥಾನವನ್ನು ತೊರೆಯಲಿದ್ದಾರೆ. ಮಧ್ಯಮ ವೇಗಿ 1983 ರಲ್ಲಿ ಭಾರತದ ಐತಿಹಾಸಿಕ ವಿಶ್ವಕಪ್ ವಿಜಯದ ರೂವಾರಿಗಳಲ್ಲಿ ಒಬ್ಬರಾಗಿದ್ದರು. ವಿಶ್ವಕಪ್ ನ ಎಂಟು ಪಂದ್ಯಗಳಲ್ಲಿ ಅವರು 18 ವಿಕೆಟ್‌ಗಳನ್ನು ಪಡೆದಿದ್ದರು. ಇದು ಪ್ರತಿಷ್ಠಿತ ಪಂದ್ಯಾವಳಿಯ 1983ರ ಆವೃತ್ತಿಯಲ್ಲಿ ಬೌಲರ್ ನ ಅತ್ಯುತ್ತಮ ಸಾಧನೆಯಾಗಿತ್ತು.