2 ಬಿ ಮೀಸಲಾತಿ ರದ್ದು ಆದೇಶ: ಮರುಪರಿಶೀಲನೆಗೆ ಎಸ್ಸೆಸ್ಸೆಫ್ ಆಗ್ರಹ
ರಾಜ್ಯಸರಕಾರವು ತುರ್ತಾಗಿ ಮೀಸಲಾತಿ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿರುವುದನ್ನು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಖಂಡಿಸಿದೆ. ಎಸ್ಸಿ ಎಸ್ಟಿ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ ಈ ತನಕ ಮುಸ್ಲಿಮರಿಗೆ 2B ಅಡಿಯಲ್ಲಿ ನೀಡಲಾಗುತ್ತಿದ್ದ 4% ಮೀಸಲಾತಿಯನ್ನು ರದ್ದುಪಡಿಸಿರುವುದು ತಾರತಮ್ಯದ ಸ್ಪಷ್ಟ ನಿದರ್ಶನವಾಗಿದೆ.
ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಮುಸ್ಲಿಮರು ಧಾರ್ಮಿಕ ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ನ್ಯಾಯಯುತವಾದ ಮೀಸಲಾತಿ ಪಡೆಯುತ್ತಿದ್ದರು. ಅದನ್ನು ರದ್ದುಪಡಿಸುವ ಮೂಲಕ ಕೋಮುವಾದಿಗಳನ್ನು ತೃಪ್ತಿಪಡಿಸುವ ಕಾರ್ಯವನ್ನು ಸರಕಾರ ಮಾಡಿದೆ.
"ಸಮಾನತೆಯ ಅವಕಾಶ ಎಂಬ ತತ್ವ ಹಾಗೂ ಪ್ರಭುತ್ವದಲ್ಲಿ ಪ್ರಾತಿನಿಧ್ಯ ಪಡೆಯದ ಸಮುದಾಯಗಳ ಬೇಡಿಕೆಯನ್ನು ಪೂರೈಸುವುದು ಎಂಬ ಎರಡು ಅಂಶಗಳನ್ನು ಕಾಪಾಡಿಕೊಳ್ಳಬೇಕು’" ಎಂದು ಸಂವಿಧಾನ ರಚನಾ ಸಭೆಯ ಭಾಷಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಪಾದಿಸಿದ್ದರು. ಅಂಬೇಡ್ಕರ್ ರ ಆಶಯದಂತೆ ಸೂಕ್ತವಾದ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿರುವ ಸಮುದಾಯವಾಗಿರುವ ಮುಸ್ಲಿಮರಿಗೆ ಧಾರ್ಮಿಕ ಅಲ್ಪಸಂಖ್ಯಾತರಿಗೆಂಬ ನಿಟ್ಟಿನಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ಜು ರದ್ದುಪಡಿಸಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದೆ.