ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳು ಈಡೇರಿಸ್ತೇವೆ: ರಾಹುಲ್ ಗಾಂಧಿ ಮಹತ್ವದ ಘೋಷಣೆ

ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳು ಈಡೇರಿಸ್ತೇವೆ: ರಾಹುಲ್ ಗಾಂಧಿ ಮಹತ್ವದ ಘೋಷಣೆ 
ವದೆಹಲಿ : ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ನ ದೊಡ್ಡ ಗೆಲುವಿನ ಬಗ್ಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದ ಜನತೆಗೆ, ಕಾರ್ಯಕರ್ತರಿಗೆ, ನಾಯಕರಿಗೆ ಹಾಗೂ ಕರ್ನಾಟಕದಲ್ಲಿ ದುಡಿದ ಎಲ್ಲ ನಾಯಕರನ್ನ ಅಭಿನಂದಿಸುತ್ತೇನೆ ಎಂದು ಹೇಳಿದರು.

ಗೆಲುವಿನ ಕುರಿತು ಮಾತು ಮುಂದುವರೆಸಿದ ರಾಹುಲ್, 'ಬಡವರ ಶಕ್ತಿ ಇತ್ತು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಡವರ ಜೊತೆಗಿದೆ. ಈ ದೇಶ ಪ್ರೀತಿಯನ್ನ ಇಷ್ಟಪಡುತ್ತದೆ ಎಂದು ಕರ್ನಾಟಕ ಹೇಳಿದೆ. ಕರ್ನಾಟಕದಲ್ಲಿ ದ್ವೇಷದ ಮಾರುಕಟ್ಟೆ ಮುಚ್ಚಿದೆ, ಪ್ರೀತಿಯ ಅಂಗಡಿಗಳು ತೆರೆದಿವೆ. ಮೊದಲ ಸಚಿವ ಸಂಪುಟದಲ್ಲಿ ಮೊದಲ ದಿನವೇ 5 ಭರವಸೆಗಳನ್ನ ಈಡೇರಿಸುತ್ತೇವೆ' ಎಂದರು.

ಅಂದ್ಹಾಗೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕರ್ನಾಟಕದ ಜನತೆಗೆ 5 ಭರವಸೆಗಳನ್ನ ನೀಡಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಕಾಂಗ್ರೆಸ್ ಹೇಳಿತ್ತು. ಇನ್ನು ಹೊಸ ಶಿಕ್ಷಣ ನೀತಿಯನ್ನು ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು.

63 ಗಡಿ ತಾಲೂಕುಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನ ಅಭಿವೃದ್ಧಿ ಪಡಿಸಲಾಗುವುದು ಮತ್ತು ಎಲ್ಲಾ ಸಮುದಾಯಗಳ ಆಶಯ ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ಮೀಸಲಾತಿಯ ಮಿತಿಯನ್ನ 50% ರಿಂದ 75% ಕ್ಕೆ ಹೆಚ್ಚಿಸಲಾಗುವುದು ಎಂದು ಪಕ್ಷವು ಹೇಳಿತ್ತು.

ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ಭತ್ಯೆ.!
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 2,000 ರೂಪಾಯಿ ಭತ್ಯೆ ನೀಡುವುದಾಗಿ ಭರವಸೆ ನೀಡಿತ್ತು. ಇದಲ್ಲದೇ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ನಿರುದ್ಯೋಗಿ ಡಿಪ್ಲೋಮಾದಾರರಿಗೆ ಮಾಸಿಕ 1500 ರೂ.ಗಳನ್ನು ಎರಡು ವರ್ಷಗಳವರೆಗೆ ನೀಡಲಾಗುವುದು.

ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಭತ್ಯೆ.!
ಇದಲ್ಲದೇ ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಪ್ರತಿ ತಿಂಗಳು 5000 ರೂ.ಗಳ ವಿಶೇಷ ಭತ್ಯೆ ನೀಡುವುದಾಗಿಯೂ ಘೋಷಿಸಲಾಗಿತ್ತು. ಇದೇ ವೇಳೆ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಬಿಜೆಪಿ ಜಾರಿಗೆ ತಂದಿರುವ ಜನವಿರೋಧಿ ಕಾನೂನು ಹಾಗೂ ಎಲ್ಲ ಅನ್ಯಾಯದ ಕಾನೂನುಗಳನ್ನ ರದ್ದುಗೊಳಿಸುವುದಾಗಿಯೂ ಘೋಷಿಸಿದರು.

Previous Post Next Post