ಮುಂದುವರಿದ ಮಳೆಯಾರ್ಭಟ: ದಕ್ಷಿಣ ಕನ್ನಡ ಉಡುಪಿ ಕೊಡಗು ಸೇರಿ ಆರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮುಂದುವರಿದ ಮಳೆಯಾರ್ಭಟ: ದಕ್ಷಿಣ ಕನ್ನಡ ಉಡುಪಿ ಕೊಡಗು ಸೇರಿ ಆರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ  


ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ನಾಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ನಾಳೆ (ಜುಲೈ 26) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.


ಮುಂದಿನ 24 ಘಂಟೆಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ನಾಳೆ (ಜುಲೈ 26) ಈ ಎರಡು ಜಿಲ್ಲೆಗಳ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿರುವ ಕಾರಣ ಮುನ್ನೆಚ್ಚರಿಕೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ನಾಳೆ ಅಂಗನವಾಡಿ, ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಖಾಸಗಿ ವಿದ್ಯಾಸಂಸ್ಥೆಗಳಿಗೂ ರಜೆ ಘೋಷಿಸಿದ್ದು, ಕಾಲೇಜಿಗೆ ಬರಲಾಗದ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವಂತೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ, ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದಾರೆ.


ಕೊಡಗು, ಉಡುಪಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶಿಸಿದ್ದಾರೆ. ಅದೇ ರೀತಿ, ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಿಸಿ ಜಿಲ್ಲಾಡಳಿತವು ಆದೇಶಿಸಿದೆ. ಇದು ಸತತ ಮೂರನೇ ರಜೆಯಾಗಿದೆ. ಪದವಿ ಕಾಲೇಜು ಸ್ನಾತಕೋತ್ತರ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.


ಉತ್ತರ ಕನ್ನಡದ ನಾಲ್ಕು ತಾಲೂಕಿಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರವಾರ, ಜೋಯಿಡಾ, ದಾಂಡೇಲಿ, ಹಳಿಯಾಳ ತಾಲೂಕಿನ ಶಾಲೆ ಮತ್ತು ಪದವಿಪೂರ್ವ ಕಾಲೇಜಿಗೆ ರಜೆ ಘೋಷಿಸಿ ಡಿಸಿ ಪ್ರಭುಲಿಂಗ್ ಕವಲಿಕಟ್ಟಿ ಆದೇಶಿಸಿದ್ದಾರೆ.


ಬೆಳಗಾವಿಯ ಶಾಲೆಗಳಿಗೆ ರಜೆ

ಬೆಳಗಾವಿ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದ ಹಿನ್ನೆಲೆ ಬೆಳಗಾವಿ ತಾಲೂಕು, ಬೆಳಗಾವಿ ನಗರ, ಖಾನಾಪುರ, ಮೂಡಲಗಿ, ಸವದತ್ತಿ, ಯರಗಟ್ಟಿ, ನಿಪ್ಪಾಣಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಕ ಮಳೆಯಾಗುತ್ತಿರುವ ಜಿಲ್ಲೆಯ ಆರು ತಾಲೂಕಿನ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಖಾನಾಪುರ ತಾಲೂಕಿನಲ್ಲಿ ಮಾತ್ರ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶಿಸಿದ್ದಾರೆ.


ಚಿತ್ರದುರ್ಗ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಜುಲೈ 26 ಮತ್ತು 27 ರಂದು ಎರಡು ದಿನಗಳ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ‌ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅಂಗನವಾಡಿ ಹಾಗೂ ಶಾಲಾ ಮಕ್ಕಳು ಶಾಲೆಗೆ ಹೋಗಿ ಬರುವುದು ಕಷ್ಟವಾಗುತ್ತಿದೆ.


ಮಕ್ಕಳ ಹಿತದೃಷ್ಟಿಯಿಂದ ಕಾಲೇಜು ಹೊರತುಪಡಿಸಿ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

ವಿಪತ್ತು ನಿರ್ವಹಣಾ ಕಾಯ್ದೆ ಕಲಂ 26, 30 ಮತ್ತು 34 ರ ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಷರತ್ತುಗಳೊಂದಿಗೆ ರಜೆ ಘೋಷಿಸಲಾಗಿದೆ.


Previous Post Next Post