ಬಾಂಗ್ಲಾದೇಶ: ಸರಕಾರಿ ವಿರುದ್ಧ ಪ್ರತಿಭಟನೆಗಳು ಪರಾಕಾಷ್ಠೆಗೆ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾದ ಶೇಖ್ ಹಸೀನಾ
ನವದೆಹಲಿ: ರಾಜಕೀಯದಲ್ಲಿ ಯಾವ ಕ್ಷಣ ಏನು ಬೇಕಾದರೂ ಆಗಬಹುದು. ಬೆಳಗ್ಗೆ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಮಧ್ಯಾಹ್ನದ ವೇಳೆಗೆ ರಾಜೀನಾಮೆ ನೀಡಿ ಅವಸರದಲ್ಲೇ ದೇಶ ತೊರೆದರು. ಪಕ್ಕದ ರಾಷ್ಟ್ರ ಭಾರತಕ್ಕೆ ಬಂದಿಳಿದ ಶೇಖ್ ಹಸೀನಾ ಲಂಡನ್ಗೆ ಹಾರಲು ಯೋಜಿಸಿದ್ದಾರೆ.
ಬ್ರಿಟನ್ನಲ್ಲಿ ಆಶ್ರಯಕ್ಕಾಗಿ (Asylum-ತಮ್ಮ ದೇಶಗಳಲ್ಲಿ ಜೀವ ಭಯವಿರುವ ವ್ಯಕ್ತಿಗಳು ಬ್ರಿಟನ್ನಲ್ಲಿ ಆಶ್ರಯ ಪಡೆಯಲು ಅನುಮತಿ ನೀಡುವ ಕಾನೂನು) ಎದುರು ನೋಡುತ್ತಿರುವ ನಾಯಕಿ ಅಲ್ಲಿಯವರೆಗೂ ಭಾರತದಲ್ಲೇ ತಂಗಲಿದ್ದಾರೆ.
ರಾಜೀನಾಮೆ ನೀಡಿದ ನಂತರ ಹಿಂಸಾಚಾರ ಪೀಡಿತ ರಾಷ್ಟ್ರದಿಂದ ಪಲಾಯನ ಮಾಡಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮೂರನೇ ದೇಶದಲ್ಲಿ ರಾಜಕೀಯ ಆಶ್ರಯ ಪಡೆಯುವವರೆಗೆ ಭಾರತದಲ್ಲಿಯೇ ಇರುತ್ತಾರೆ ಎಂದು ಮೂಲಗಳು ತಿಳಿಸಿವೆ. ಬಾಂಗ್ಲಾ ದೇಶದಾದ್ಯಂತ ಒಂದು ತಿಂಗಳ ಕಾಲ ನಡೆದ ಬೃಹತ್ ಮತ್ತು ಹಿಂಸಾತ್ಮಕ ಸರ್ಕಾರಿ ವಿರೋಧಿ ಪ್ರತಿಭಟನೆಗಳ ನಂತರ ಬಾಂಗ್ಲಾದೇಶದಿಂದ ಪಲಾಯನ ಮಾಡಿದ 76 ವರ್ಷದ ಹಸೀನಾ, ಯುಕೆಯಲ್ಲಿ ಆಶ್ರಯ ಬಯಸುತ್ತಿದ್ದಾರೆ.
ಲಂಡನ್ ಹೋಗಲು ಕಾರಣವೇನು?
ಯುಕೆ ಪೌರತ್ವವನ್ನು ಹೊಂದಿರುವ ಹಸೀನಾ ಅವರ ಕಿರಿಯ ಸಹೋದರಿ ರೆಹಾನಾ ಕೂಡ ಅವರ ಜೊತೆಯಲ್ಲಿದ್ದಾರೆ. ರೆಹಾನಾ ಅವರ ಮಗಳು ಟುಲಿಪ್ ಸಿದ್ದಿಕ್ ಅವರು ಲೇಬರ್ ಪಾರ್ಟಿಯಿಂದ ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ. ಮೂಲಗಳ ಪ್ರಕಾರ, ಹಸೀನಾಗೆ ರಾಜಕೀಯ ಆಶ್ರಯದ ಬಗ್ಗೆ ಯುಕೆಯಿಂದ ಯಾವುದೇ ದೃಢೀಕರಣವನ್ನು ಇದುವರೆಗೆ ಸಿಕ್ಕಿಲ್ಲ.
ಹಸೀನಾಗೆ ಭಾರತದ ಸಹಾಯ
ಸಂಜೆ 6:30 ರ ಸುಮಾರಿಗೆ, ಬಾಂಗ್ಲಾದೇಶದ ವಾಯುಪಡೆಯ C-130 ಸಾರಿಗೆ ವಿಮಾನ AJAX1413ದಲ್ಲಿ ಹಸೀನಾ ಮತ್ತು ಅವರ ಸಹೋದರಿ ಘಾಜಿಯಾಬಾದ್‌ನ ಹಿಂಡನ್ ಏರ್ ಬೇಸ್ ತಲುಪಿತು ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ. ವಿಮಾನ ಹಾರಾಟವನ್ನು ಭಾರತೀಯ ವಾಯುಪಡೆ ಮತ್ತು ಭದ್ರತಾ ಏಜೆನ್ಸಿಗಳು ಭಾರತೀಯ ವಾಯುಪ್ರದೇಶದ ಪ್ರವೇಶದಿಂದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಮೇಲ್ವಿಚಾರಣೆ ಮಾಡಿವೆ ಎಂದು ವರದಿ ಮಾಡಿದೆ.
ಅಜಿತ್ ದೋವಲ್ ಭೇಟಿಯಾದ ಹಸೀನಾ
ಭಾರತಕ್ಕೆ ಬಂದಿಳಿದ ಶೇಖ್ ಹಸೀನಾ ಅವರು ಮೊದಲಿಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ಹಿರಿಯ ಮಿಲಿಟರಿ ಅಧಿಕಾರಿಗಳು ವಾಯುನೆಲೆಯಲ್ಲಿ ಭೇಟಿಯಾದರು. ಅವರಿಗೆ ಸಂಪೂರ್ಣ ಭದ್ರತೆಯನ್ನು ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಭಾರತೀಯ ವಾಯುಪಡೆ ಮತ್ತು ಇತರ ಭದ್ರತಾ ಸಂಸ್ಥೆಗಳು ಹಸೀನಾಗೆ ಭದ್ರತೆ ಒದಗಿಸುತ್ತಿವೆ.
ಇಂಡಿಯಾ ಅಲರ್ಟ್
ಏತನ್ಮಧ್ಯೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಜೈಶಂಕರ್ ಜೊತೆ ಮಾತನಾಡಿದ್ದಾರೆ. ಸಂಸತ್ತಿನ ಹೊರಭಾಗದಲ್ಲಿ ಇಬ್ಬರೂ ಸಂಕ್ಷಿಪ್ತವಾಗಿ ಮಾತನಾಡಿದರು ಎಂದು ಕಾಂಗ್ರೆಸ್ ಹೇಳಿದೆ.
/ವರದಿ