ಇಸ್ರೇಲ್: 12 ವರ್ಷಗಳಿಂದ ಅಧಿಕಾರದಲ್ಲಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದ ಅಧಿಕಾರ ಅಂತ್ಯ, ಯಾಮಿನಾ ಪಾರ್ಟಿ ಮುಖಂಡ ನಫ್ಟಾಲಿ ಬೆನ್ನೆಟ್ ಮುಂದಿನ ಪ್ರಧಾನಿ
ಜೆರುಸಲೇಂ: ಎಂಟು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳ ಸರಕಾರ ಇಸ್ರೇಲ್‌ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರಿಂದಾಗಿ 12 ವರ್ಷಗಳಿಂದ ಅಧಿಕಾರದಲ್ಲಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷ ವಿಪಕ್ಷದಲ್ಲಿ ಕೂರುವ ಸ್ಥಿತಿಯಾಗಿದೆ.
120 ಸ್ಥಾನದ ಇಸ್ರೇಲ್ ಸಂಸತ್‌ನಲ್ಲಿ ಸರಳ ಬಹುಮತಕ್ಕೆ 61 ಸ್ಥಾನಗಳು ಬೇಕು. ಹೊಸ ಸರಕಾರದಲ್ಲಿ ಯೆಶ್ ಅತಿಡ್ ಪಕ್ಷಕ್ಕೆ 17, ಬ್ಲೂ ಆಯಂಡ್ ವೈಟ್ ಪಕ್ಷ 8, ಯಿಸ್ರೇಲ್ ಬಿಟಿನ್ 7, ಲೇಬರ್ 7, ಯಾಮಿನಾ ಪಾರ್ಟಿ, ನ್ಯೂಹೋಪ್, ಮೋರಿಟ್ಜ್ ಪಕ್ಷಗಳು ತಲಾ 6, ರಾಮ್ 4 ಸ್ಥಾನಗಳನ್ನು ಹೊಂದುವ ಮೂಲಕ ಅಗತ್ಯ ಸಂಖ್ಯಾಬಲ ಪಡೆದುಕೊಂಡಿವೆ.
ಯಾಮಿನಾ ಪಾರ್ಟಿ ಮುಖಂಡ ನಫ್ಟಾಲಿ ಬೆನ್ನೆಟ್ ಮೊದಲ 2 ವರ್ಷ ಪ್ರಧಾನ ಮಂತ್ರಿಯಾಗಲಿದ್ದಾರೆ. ಅಧಿಕಾರ ಹಂಚಿಕೆಯ ಒಪ್ಪಂದದ ಅನ್ವಯ ಸೆಪ್ಟಂಬರ್ 2023ರವರೆಗೆ ಬೆನ್ನೆಟ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಅನಂತರದ 2 ವರ್ಷಗಳನ್ನು ಯೆಶ್ ಅತಿಡ್ ಪಕ್ಷದ ಯೈರ್ ಲೆಪಿಡ್ ಪ್ರಧಾನಿಯಾಗಲಿದ್ದಾರೆ.
ಇಸ್ರೇಲಿ ಸಂಸತ್ ಕೆನ್ನೆಸೆಟ್‌ನಲ್ಲಿ ಮಾತನಾಡಿದ ಮಾಜಿ ಪಿಎಂ ಬೆಂಜಮಿನ್ ನೆನತ್ಯಾಹು ಶೀಘ್ರವೇ ಮತ್ತೆ ಅಧಿಕಾರಕ್ಕೆ ಬರುತ್ತೇನೆ ಮತ್ತು ತಮ್ಮ ಮೇಲೆ ಇರುವ ಆರೋಪಗಳು ನಿರಾಧಾರ ಎಂದು ಪ್ರತಿಪಾದಿಸಿದ್ದಾರೆ. ನೂತನ ಪ್ರಧಾನಿ ನಫ್ಟಾಲಿ ಬೆನ್ನೆಟ್ ಮಾತನಾಡಿ ಅಮೆರಿಕದ ಜತೆಗೂಡಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಇರಾನ್ ಪರಮಾಣು ಕಾರ್ಯಕ್ರಮಕ್ಕೆ ವಿರೋಧಿಸುವುದಾಗಿ ಹೇಳಿದ್ದಾರೆ.