ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಸಿಎಂ ನಿವಾಸದಲ್ಲಿ ಬಿರುಸುಗೊಂಡ ರಾಜಕೀಯ
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಜರುಗಿದವು. ಯಡಿಯೂರಪ್ಪ ನಾಯಕತ್ವದ ಪರವಾಗಿರುವ ಸಚಿವರು ಮತ್ತು ಶಾಸಕರು ಬೆಳ್ಳಂಬೆಳಗ್ಗೆಯೇ ಕಾವೇರಿ ನಿವಾಸಕ್ಕೆ ಆಗಮಿಸಿ ತಮ್ಮ ಅಚಲ ನಿಷ್ಠೆಯನ್ನು ತೋರಿದರು.
ಸಚಿವರಾದ ಭೈರತಿ ಬಸವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಮಹೇಶ್ ಕುಮ್ಟಳ್ಳಿ, ರಾಜುಗೌಡ ನಾಯಕ್, ರವಿ ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರರು ಕಾವೇರಿಗೆ ಆಗಮಿಸಿದ್ದರು.
ಇದೇ ರೀತಿ ಶಾಸಕರಾದ ಅರುಣ್ ಪೂಜಾರ್, ಶಂಕರ್ ಪಟೇಲ್ ಮುನೇನಕೊಪ್ಪ, ಶಿವರಾಜ್ ಪಾಟೀಲ್, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಅರಗ ಜ್ಞಾನೇಂದ್ರ, ಪರಣ್ಣ ಮನವಳ್ಳಿ ಸೇರಿದಂತೆ ಮತ್ತಿತರ ಶಾಸಕರು ಬಿಎಸ್‍ವೈ ಪರವಾಗಿದ್ದಾರೆ.
ಬಹುತೇಕ ಸಂಜೆಯೊಳಗೆ ಇನ್ನು ಅನೇಕ ಶಾಸಕರು ಬೆಂಗಳೂರಿಗೆ ಆಗಮಿಸಲಿದ್ದು, ಯಡಿಯೂರಪ್ಪ ನಾಯಕತ್ವವನ್ನು ಬದಲಾವಣೆ ಮಾಡದಂತೆ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಮನವಿ ಮಾಡಲಿದ್ದಾರೆ.
ತೆರೆಮರೆಯಲ್ಲಿ ವಿರೋಧಿ ಬಣಕ್ಕೆ ಶಕ್ತಿ ಪ್ರದರ್ಶಿಸಲು ಸಜ್ಜಾಗಿರುವ ಬಿಎಸ್‍ವೈ ಆಪ್ತರು ಶಾಸಕರನ್ನು ಒಗ್ಗೂಡಿಸುವತ್ತ ಚಿತ್ತ ಹರಿಸಿದ್ದಾರೆ.
ಸಹಿ ಸಂಗ್ರಹಣೆ ಮಾಡದಂತೆ ಹೈಕಮಾಂಡ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರೂ ಯಡಿಯೂರಪ್ಪ ಬೆಂಬಲಿಗರು ಮಾತ್ರ ತಂತ್ರಕ್ಕೆ ಪ್ರತಿ ತಂತ್ರ ಎಂಬಂತೆ ರಹಸ್ಯ ತಂತ್ರವನ್ನು ಹೆಣೆಯುತ್ತಿದ್ದಾರೆ.
ಬೆಂಬಲಿಗರು ಬೆಂಗಳೂರಿಗೆ ಬರಬರಾದೆಂದು ಬಿಎಸ್‍ವೈ ಸೂಚನೆ ಕೊಟ್ಟಿದ್ದರೂ ಶಾಸಕರು ಮಾತ್ರ ತಮ್ಮ ನಾಯಕರುಗಳಿಗೆ ಬೆಂಬಲ ಸೂಚಿಸಲು ರಾಜಧಾನಿಗೆ ದಾಂಗುಡಿ ಇಟ್ಟಿದ್ದಾರೆ.