ಮೈಸೂರು: ನೂತನ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅಧಿಕಾರ ಹಸ್ತಾಂತರಕ್ಕೂ ಭಾರದ ರೋಹಿಣಿ ಸಿಂಧೂರಿ, ವಾಟ್ಸ್ಆಯಪ್ ಮೂಲಕ ಮೈಸೂರು ಜನತೆಗೆ ಧನ್ಯವಾದ ಸಲ್ಲಿಸಿದ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ.ಗೌತಮ್ ಬಗಾದಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಯೋಗೀಶ್ ಉಪಸ್ಥಿತಿಯಲ್ಲಿ ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಅವರು ಅಧಿಕಾರ ಹಸ್ತಾಂತರಿಸಿದರು. ನಗರಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್ ಜೊತೆಗಿನ ಬಹಿರಂಗ ಕದನದ ನಂತರ ವರ್ಗಾವಣೆಗೊಂಡಿರುವ ಮೈಸೂರಿನ ಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಗೈರಾಗಿದ್ದರು.
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ನೂತನ ಜಿಲ್ಲಾಧಿಕಾರಿ ಬಗಾದಿ ಅವರು, ನಾನೊಬ್ಬ ತುಂಬಾ ಲೋ ಪ್ರೊಫೈಲ್ ಅಧಿಕಾರಿ. 13 ವರ್ಷದ ಸೇವೆಯಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಅಷ್ಟೆ. ನಿಷ್ಠೆಯಿಂದ ಪ್ರಮಾಣಿಕತೆಯಿಂದ ಪಾರದರ್ಶಕವಾಗಿ ನಮ್ಮ ಕೆಲಸ ಮಾಡಿಕೊಂಡು ಹೋದರೆ ಜನರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಅವರೇ ಬಂದು ಬೆಂಬಲ ಕೊಡೋದನ್ನು ನೋಡಿದ್ದೇನೆ ಎಂದರು.
ಮೈಸೂರು ಒಂದು ಸಾಂಪ್ರದಾಯಿಕ ನಗರ. ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇರಬಹುದು. ನಾನು ಪಾರದರ್ಶಕವಾಗಿ ಜನರಿಗೆ ಹತ್ತಿರವಾಗಿ ಆಡಳಿತ ಕೊಡುವುದಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಎಲ್ಲ ವರ್ಗದ ಜನರನ್ನು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ಕೆಲಸ ನಾನು ಮಾಡಿಕೊಂಡು ಹೋದರೆ ಎಷ್ಟೇ ದೊಡ್ಡ ಸಮಸ್ಯೆ ಪರಿಹರಿಸಬಹುದು ಎಂದು ನಂಬಿರುವುದಾಗಿ ಹೇಳಿದರು.
ಕೋವಿಡ್ ನಿರ್ವಹಣೆಗೆ ಮೊದಲ ಆದ್ಯತೆ ಕೊಡಲಾಗುವುದು. ಹೊಸದಾಗಿ ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬಂದಿದ್ದೇನೆ. ಮೈಸೂರಿನಲ್ಲಿ ಏನೇನು ಒಳ್ಳೆಯ ಕೆಲಸ ನಡೆದಿದೆಯೋ ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ನಿನ್ನೆ ರಾತ್ರಿ ಆದೇಶವಾಗಿದೆ. ಹಿಂದಿನ ಜಿಲ್ಲಾಧಿಕಾರಿ, ಎಡಿಸಿ, ಸಿಇಒಗಳೊಂದಿಗೆ ಮಾತನಾಡಿದ್ದೇನೆ. ಹಿಂದೆ ಇದ್ದ ಮಹಾನಗರ ಪಾಲಿಕೆ ಆಯುಕ್ತರ ಜತೆಗೂ ಮಾತನಾಡಿದ್ದೇನೆ ಎಂದ ಬಗಾದಿ ಅವರು, 'ಮೈಸೂರಿಗೆ ವರ್ಗಾವಣೆ ಆಗಲಿದೆ ಎಂದು ಊಹಿಸಿರಲಿಲ್ಲ. ನನ್ನ ಸರ್ವಿಸ್ನಲ್ಲಿ ವಿವಾದದಲ್ಲಿ ಯಾವಾಗಲೂ ಇಲ್ಲ. ಹಾಗಾಗಿ ನನ್ನ ಹೆಸರು ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ತುಂಬಾ ಲೋಪ್ರೊಫೈಲ್ ಅಧಿಕಾರಿ' ಎಂದರು.
ಜನತೆಗೆ ರೋಹಿಣಿ ಸಿಂಧೂರಿ ಧನ್ಯವಾದ
ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಾಟ್ಸ್ಆಯಪ್ ಮೂಲಕ ಮೈಸೂರು ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ. ಇಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.