ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸೇರಿ ಒಟ್ಟು 7ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರದ ಆದೇಶ
ಬೆಂಗಳೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಬಿ. ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸೇರಿ ಒಟ್ಟು ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಮತ್ತು ಧಾರ್ಮಿಕ-ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದರೆ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ದಿ ಇಲಾಖೆಯ ಇ ಆಡಳಿತದ ನಿರ್ದೇಶಕಿಯಾಗಿ ವರ್ಗ ಮಾಡಲಾಗಿದೆ. ಡಾ| ಬಗಾದಿ ಗೌತಮ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಹೊಣೆ ಮತ್ತು ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಈಗಾಗಲೇ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತೆ ನಡುವಿನ ಕಿತ್ತಾಟ ಬೀದಿಗೆ ಬಂದಿದ್ದು ಪರಸ್ಪರ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು, ಈ ನಡುವೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜಿನಾಮೆಯನ್ನು ನೀಡಲು ಮುಂದಾಗಿದ್ದು ಕೂಡಾ ಗೊತ್ತಿರುವ ವಿಚಾರ, ಈ ನಡುವೆ ಸರಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆ ಬೆನ್ನಲ್ಲೇ ಸಿಎಂ ಭೇಟಿಗೆ ದೌಡಾಯಿಸಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ
ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳ ಗಲಾಟೆ ಈಗ ಮತ್ತೊಂದು ಸ್ವರೂಪ ಪಡೆದಿದೆ. ಜಿಲ್ಲಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯಕ್ತೆಯಾಗಿದ್ದ ಶಿಲ್ಪಾ ನಾಗ್ ಅವರನ್ನು ಕಳೆದ ಶನಿವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ರೋಹಿಣಿ ಸಿಂಧೂರಿ ಅವರು ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ನಿವಾಸಕ್ಕೆ ಇಂದು ಬೆಳಗ್ಗೆ ತಮ್ಮ ಖಾಸಗಿ ವಾಹನದಲ್ಲಿ ಆಗಮಿಸಿದ ರೋಹಿಣಿ ಸಿಂಧೂರಿ ಅವರು ಸಿಎಂ ರನ್ನು ಭೇಟಿಯಾಗಿ ವರ್ಗವಾಣೆ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲ, ವರ್ಗಾವಣೆಯಾದರೆ ತನ್ನದೇ ತಪ್ಪು ಎಂದು ಬಿಂಬಿಸಿದಂತಾಗುತ್ತದೆ ಎಂದು ರೋಹಿಣಿ ಸಿಂಧೂರಿಯವರು ಹೇಳಿದ್ದಾರೆ ಎನ್ನಲಾಗಿದೆ
ರೋಹಿಣಿ ಸಿಂಧೂರಿಯವರು ಸುಮಾರು ಅರ್ಧ ಗಂಟೆಗಳ ಕಾಲ ಸಿಎಂ ನಿವಾಸದಲ್ಲಿದ್ದರು. ಆದರೆ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಿರಾಸೆಯಿಂದಲೇ ರೋಹಿಣಿ ಸಿಂಧೂರಿ ಸಿಎಂ ನಿವಾಸದಿಂದ ತೆರಳಿದ್ದಾರೆ.