ವಿಶ್ವ ಕಪ್ ಟೆಸ್ಟ್ ಫೈನಲ್ ದೊಡ್ಡ ಸವಾಲು: ವಿರಾಟ್ ಕೊಹ್ಲಿ
ಮುಂಬಯಿ : ನ್ಯೂಜಿಲ್ಯಾಂಡ್ ಎದುರಿನ ವಿಶ್ವಕಪ್ ಟೆಸ್ಟ್ ಫೈನಲ್ ದೊಡ್ಡ ಸವಾಲು ಎಂಬುದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮುಂಬಯಿಯಲ್ಲಿ ಕ್ವಾರಂಟೈನ್ ಮುಗಿಸಿ ಬುಧವಾರ ಲಂಡನ್‌ಗೆ ವಿಮಾನ ಏರುವ ಮುನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
“ಇದು ಮೊದಲ ಟೆಸ್ಟ್ ವಿಶ್ವಕಪ್ ಫೈನಲ್. ಖಂಡಿತವಾಗಿಯೂ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಆದರೆ ಹಿಂದಿನಂತೆ ಇದು ಸಂಭ್ರಮಿಸುವ ಸಮಯವೂ ಹೌದು. ನನ್ನ ಮೇಲಂತೂ ಯಾವುದೇ ಒತ್ತಡವಿಲ್ಲ’ ಎಂದು ಕೊಹ್ಲಿ ಹೇಳಿದರು.
ವಿಶ್ವಕಪ್ ಫೈನಲ್ ಮತ್ತು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ನಡುವೆ ದೊಡ್ಡ ಅಂತರ ಇರುವ ಕುರಿತು ಪ್ರತಿಕ್ರಿಸಿದ ವಿರಾಟ್ ಕೊಹ್ಲಿ, “ರಿಲ್ಯಾಕ್ಸ್ ಆಗಲು ನಮಗೆಲ್ಲ ಇದೊಂದು ಅತ್ಯುತ್ತಮ ಅವಕಾಶ.
ಸ್ವಲ್ಪ ಕಾಲ ನಿರಾಳವಾಗಿರಬಹುದು. ಪುನರ್ ಸಂಘಟನೆ ಹಾಗೂ ಅಭ್ಯಾಸಕ್ಕೆ ಧಾರಾಳ ಅವಕಾಶ ಲಭಿಸಲಿದೆ. ಇಂಗ್ಲೆಂಡ್ ವಾತಾವರಣವನ್ನೂ ಸಂಪೂರ್ಣವಾಗಿ ಅರಿಯಬಹುದಾಗಿದೆ. ಪ್ರಮುಖ ಸರಣಿಯೊಂದಕ್ಕೆ ಸಜ್ಜಾಗಲು ಇಂಥದೊಂದು ಅನುಕೂಲ ಲಭಿಸುವುದು ನಿಜಕ್ಕೂ ಒಳ್ಳೆಯದು’ ಎಂದರು.