ಜುಲೈ 19, 22 ರಂದು SSLC ಪರೀಕ್ಷೆ: ಪರೀಕ್ಷಾ ಕೇಂದ್ರಗಳು ಹೇಗಿರಲಿದೆ?? ಇಲ್ಲಿದೆ ಮಾಹಿತಿ

ಜುಲೈ 19, 22 ರಂದು SSLC ಪರೀಕ್ಷೆ: ಪರೀಕ್ಷಾ ಕೇಂದ್ರಗಳು ಹೇಗಿರಲಿದೆ?? ಇಲ್ಲಿದೆ ಮಾಹಿತಿ



ಬೆಂಗಳೂರು : 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಕ್ಕೆ ಇನ್ನು ಎರಡು ದಿನ ಬಾಕಿ ಇದೆ. ಜುಲೈ 19 ಮತ್ತು 22ರಂದು ಎರಡು ದಿನಗಳ ಕಾಲ ನಡೆಯಲಿರುವಂತ ಪರೀಕ್ಷೆಗಾಗಿ ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಸಿದ್ಧಗೊಳಿಸಿದೆ. ಜೊತೆಗೆ ಕೊರೋನಾ ಭೀತಿಯ ನಡುವೆಯೂ ನಡೆಯುತ್ತಿರುವಂತ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಾ ಕೇಂದ್ರಗಳೆಂಬು ಭಾವಿಸಿ, ಪರೀಕ್ಷೆಗೆ ಹಾಜರಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ವಿದ್ಯಾರ್ಥಿಗಳು, ಪೋಷಕರಲ್ಲಿ ಮನವಿ ಮಾಡಿದ್ದಾರೆ.


ಹೌದು.. ಜುಲೈ 19ರಂದು ಕೋರ್ ವಿಷಯಗಳಿಗೆ ಮತ್ತು 22ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭಗೊಳ್ಳಲಿವೆ. ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನಿರ್ದೇಶಿಸಿರುವ ಎಸ್‍ಒಪಿ ಪರಿಗಣಿಸಿ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಈ ಕುರಿತಂತೆ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಬಿಇಓಗಳಿಗೂ ಮಾರ್ಗದರ್ಶನ ನೀಡಲಾಗಿದೆ.


ಪರೀಕ್ಷಾ ಕೇಂದ್ರಗಳು - ಸುರಕ್ಷಾ ಕೇಂದ್ರಗಳು

ಪರೀಕ್ಷಾ ಕೇಂದ್ರಗಳು ಸುರಕ್ಷಾ ಕೇಂದ್ರಗಳಾಗಿರಲಿವೆ. ಪ್ರತಿದಿನವೂ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಪರೀಕ್ಷೆ ನಂತರ ಸೋಂಕು ನಿವಾರಕ ದ್ರಾವಣದಿಂದ ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನಿಂದ ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಜೇಷನ್‌ ಮಾಡುವುದು, ಪರೀಕ್ಷಾ ಕೇಂದ್ರಕ್ಕೆ ಆಗಮನ ಮತ್ತು ನಿರ್ಗಮನ ಹಾಗೆಯೇ ಕೊಠಡಿ ಪ್ರವೇಶ ಸಮಯದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವುದು. ಪರೀಕ್ಷಾ ಕೇಂದ್ರದ ಪ್ರವೇಶದ ಸಂದರ್ಭದಲ್ಲಿ ಮಕ್ಕಳ ಕೈಗೆ ಸ್ಯಾನಿಟೈಜ್‌ ಮಾಡುವುದು. ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿರಬೇಕು.


ಒಂದು ಡೆಸ್ಕ್‌ಗೆ ಒಬ್ಬ ಪರೀಕ್ಷಾ‌ರ್ಥಿ ಮಾತ್ರವೇ ಇರಬೇಕು. ಮಕ್ಕಳು ಯಾವ ಸಮಯದಲ್ಲೂ ಗುಂಪು ಗೂಡುವುದನ್ನು ತಡೆಯುವುದು. ಮನೆಯಿಂದ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ತರುವುದಕ್ಕೆ ಅವಕಾಶ ಕಲ್ಪಿಸುವುದು. ಪರೀಕ್ಷಾ ಕೊಠಡಿಯಲ್ಲಿ ಮಳೆ ನೀರು ಇರುಚಲು ಸಿಂಪಡಿಸದಂತೆ ಕ್ರಮ ವಹಿಸುವುದು. ಗಾಮೀಣ ವಿಭಾಗದ ಅಭ್ಯರ್ಥಿಗಳು ಸಾಧ್ಯವಾದಷ್ಟು ತಾಲೂಕು ಕೇಂದ್ರಗಳಿಗೆ ಹೋಗದಂತೆ ಪರೀಕ್ಷಾ ಕೇಂದ್ರಗಳನ್ನು ರಚಿಸುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಎಸ್.ಓ.ಪಿ ಯಲ್ಲಿ ಸೂಚಿಸಲಾಗಿದೆ.


ವಿಶೇಷ ಕೊಠಡಿ

ಕೆಮ್ಮು, ನೆಗಡಿ, ಜ್ವರ ಮೊದಲಾದುವುಗಳಿಂದ ಬಳಲುತ್ತಿರುವ ಇಲ್ಲವೇ ಈ ಲಕ್ಷಣಗಳಿರುವ ಅಭ್ಯರ್ಥಿಗಳಿಗಾಗಿ ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳನ್ನಾಗಿ ಕಾಯ್ದಿರಿಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್‌ ಪ್ರವೇಶಿಸುವಂತೆ ಶಿಕ್ಷಣ ಇಲಾಖೆ ನಿರ್ದೇಶಿಸಲಾಗಿದೆ. ಆರೋಗ್ಯ ಕೌಂಟರ್‌ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರಲಿವೆ. ಥರ್ಮಲ್ ಸ್ಕ್ಯಾನರ್‌, ಪ‌ಲ್ಸ್‌ ಆಕ್ಸಿಮೀಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರುವುದನ್ನು ಖಾತರಿಪಡಿಸಬೇಕೆಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಶಾಲೆಯ ಗೇಟ್ ನಲ್ಲಿಯೇ ಮಾಸ್ಕ್‌ ನೀಡಲಿದೆ.


ತುರ್ತು ಚಿಕಿತ್ಸಾ ವಾಹನ

ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡಲಾಗಿದೆ. ಪರೀಕ್ಷಾ ಸಿಬ್ಬಂದಿಯೂ ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅಗತ್ಯ ಬಿದ್ದರೆ ಸಿಬ್ಬಂದಿ ಫೇಸ್ ಶೀಲ್ಡ್ ಬಳಸುವುದು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಹೊರ ರಾಜ್ಯದಿಂದ ಬರುವ ಪರೀಕ್ಷಾ‌ರ್ಥಿಗಳಿಗೆ ಅನುವಾಗುವಂತೆ ಪರೀಕ್ಷೆಗಳ ದಿವಸದಂದು ರಾಜ್ಯದ ಗಡಿ ಪ್ರವೇಶಕ್ಕೆ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ವಹಿಸಿದೆ.


ಕೋವಿಡ್‌ ಕೇರ್‌ ಸೆಂಟರ್ ಸ್ಥಾಪನೆ

ಪರೀಕ್ಷಾರ್ಥಿಗಳಿಗೆ ಕೋವಿಡ್‌ ಪಾಸಿಟೀವ್ ಕಂಡು ಬಂದಿದ್ದರೆ ಅಂತಹ ಪರೀಕ್ಷಾರ್ಥಿಗೆ ತಾಲೂಕಿಗೊಂದು ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಯೇ ಅವರಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ. ಕುಟುಂಬದಲ್ಲಿ ಯಾರಿಗಾದರೂ ಸೋಂಕು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್‌ನಲ್ಲಿದ್ದರೆ ಅವರನ್ನು ತಪಾಸಣೆ ನಡೆಸಿ ಆರೋಗ್ಯವಾಗಿರುವುದು ಕಂಡುಬಂದರೆ ಸಮೀಪದ ವಿದ್ಯಾರ್ಥಿ ಕೋವಿಡ್‌ ಕೇರ್‌ ಸೆಂಟರ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಕೋವಿಡ್‌ ಆರೈಕೆ ಕೇಂದ್ರದಲ್ಲಿ ಒಂದು ಅಂಬುಲೆನ್ಸ್‌ ವಾಹನ ಕಾಯ್ದಿರಿಸಲಾಗಿದೆ. ‌


ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ರವಾನೆ, ಪರೀಕ್ಷೆ ನಂತರ ಒ.ಎಂ.ಆರ್. ಶೀಟ್ ಗಳ ರವಾನೆ ಕುರಿತು ನಿಗದಿತ ಸೂಚನೆಗಳನ್ನು ಒದಗಿಸಲಾಗಿದ್ದು, ಹಾಗೂ ಆರೋಗ್ಯಕರ ವಾತಾವರಣದಲ್ಲಿ ಪರೀಕ್ಷೆ ಯಶಸ್ಸಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.


ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಪರೀಕ್ಷಾ ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಸೆಂಟರ್‌ಗಳನ್ನು ಮುಚ್ಚಿಸುವುದು, ಸೆಕ್ಷನ್-144 ಜಾರಿಗೊಳಿಸುವುದು, ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ ಸಮಯದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವುದು, ಪರೀಕ್ಷಾ ಕೇಂದ್ರದ ಬಳಿ ಸಂಚಾರ ಒತ್ತಡವಾದಂತೆ ಕ್ರಮ ವಹಿಸುವುದೂ ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳು ಕೈಗೊಳ್ಳಲಾಗಿದೆ.


8,76,581 ವಿದ್ಯಾರ್ಥಿಗಳ ನೊಂದಣಿ

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳ ಒಟ್ಟುಸಂಖ್ಯೆ 8,76,581. ಅದರಲ್ಲಿ 4,72,643 ವಿದ್ಯಾರ್ಥಿಗಳು ಮತ್ತು 403938 ವಿದ್ಯಾರ್ಥಿನಿಯು ಹಾಜರಾಗುತ್ತಿದ್ದಾರೆ. ಅದರಲ್ಲಿ 783955 ಹೊಸ ಅಭ್ಯರ್ಥಿಗಳು, 0977-ಪುನರಾವರ್ತಿತ ವಿದ್ಯಾರ್ಥಿಗಳು, 21817-ಖಾಸಗಿ ವಿದ್ಯಾರ್ಥಿಗಳು, 9419-ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು, ಹೊಸ ಸ್ಕೀಂ ವಿದ್ಯಾರ್ಥಿಗಳು- 392, ಹೊಸ ಸ್ಕೀಂ ಪುನರಾವರ್ತಿತ ವಿದ್ಯಾರ್ಥಿಗಳು-21 ಸೇರಿದ್ದಾರೆ.


ಪರೀಕ್ಷೆಗೆ ನೋಂದಾಯಿಸಿರುವ ಒಟ್ಟು ಶಾಲೆಗಳ ಸಂಖ್ಯೆ-14,927, ಅದರಲ್ಲಿ, ಸರ್ಕಾರಿ-5289, ಅನುದಾನಿತ - 3392, ಅನುದಾನರಹಿತ-6246 ಶಾಲೆಗಳು ನೊಂದಾಯಿಸಿಕೊಂಡಿವೆ. ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ಸಂಖ್ಯೆ -876581, ಸರ್ಕಾರಿ -351303, ಅನುದಾನಿತ - 235908, ಅನುದಾನರಹಿತ-289370 ಅಭ್ಯರ್ಥಿಗಳಿದ್ದಾರೆ.


ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ- 4884, ಸರ್ಕಾರಿ-1831, ಅನುದಾನಿತ- 1294, ಅನುದಾನರಹಿತ-1759 ಶಾಲೆಗಳ ಪರೀಕ್ಷಾ ಕೇಂದ್ರಗಳಿವೆ. ಸಾಮಾನ್ಯ ಪರೀಕ್ಷಾ ಕೇಂದ್ರಗಳು -4708, ಖಾಸಗಿ ಪರೀಕ್ಷಾ ಕೇಂದ್ರಗಳು - 176, ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು -2166, ನಾನ್‍ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು -2542 ಇವೆ.


73066 ಪರೀಕ್ಷಾ ಕೊಠಡಿಗಳು

ಒಟ್ಟು ಪರೀಕ್ಷಾ ಕೊಠಡಿಗಳು -73066, ಮುಖ್ಯಅಧೀಕ್ಷಕರು-4884, ಪ್ರಶ್ನೆಪತ್ರಿಕೆ ಅಭಿರಕ್ಷಕರು-4884, ಕೊಠಡಿ ಮೇಲ್ವಿಚಾರಕರು-80389, ಸ್ಥಾನಿಕ ಜಾಗೃತ ದಳದವರು -4884, ಮೊಬೈಲ್ ಸ್ವಾಧೀನಾಧಿಕಾರಿಗಳು -4884, ದೈಹಿಕ ಶಿಕ್ಷಣ ಶಿಕ್ಷಕರು / ಇತರೆ ಶಿಕ್ಷಕರು-4884, ಆಶಾ ಕಾರ್ಯಕರ್ತೆಯರು -9768, ಆರಕ್ಷಕರು-4884 ಮಂದಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.


ಥರ್ಮಲ್ ಸ್ಕ್ಯಾನರ್

ಜೂನ್/ಜುಲೈ 2020ರ ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಮಂಡಳಿಯಿಂದ ನೀಡಲಾಗಿದ್ದ 'ಥರ್ಮಲ್ ಸ್ಕ್ಯಾನರ್'ಗಳನ್ನೇ ಈ ಪರೀಕ್ಷೆಗೂ ಉಪಯೋಗಿಸಿಕೊಳ್ಳಲಿದೆ. ಇದರಜೊತೆಗೆ ಈಗಾಗಲೇ ಎಂಬೆಸ್ಸಿ ಗ್ರೂಪ್ ಸಂಸ್ಥೆಯವರು ಸರ್ಕಾರಿ ಪ್ರೌಢ ಶಾಲೆಗಳಿಗೆ 5,000 'ಥರ್ಮಲ್ ಸ್ಕ್ಯಾನರ್' ಗಳನ್ನು ನೀಡಿದ್ದು, ಇವುಗಳನ್ನು ಸಹ ಸಂಬಂಧಿಸಿದ ಉಪ ನಿರ್ದೇಶಕರು ತಮ್ಮ ಸುಪರ್ಧಿಗೆ ಪಡೆದು ಪರೀಕ್ಷಾ ಕೇಂದ್ರಗಳಲ್ಲಿ ಉಪಯೋಗಿಸಿಕೊಳ್ಳಲಿದ್ದಾರೆ. ಇದಾದ ಬಳಿಕವೂ ಕೊರತೆ ಉಂಟಾದಲ್ಲಿ ಆರೋಗ್ಯ ಇಲಾಖೆಯವರಿಂದ ಪಡೆದು ಉಪಯೋಗಿಸಿಕೊಳ್ಳಲಿದೆ.


ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾ‌ರ್ಥಿಗಳಿಗೆ ಹಾಗೂ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯವರ ಸುರಕ್ಷತಾದೃಷ್ಟಿಯಿಂದಒಟ್ಟು 4884 ಪರೀಕ್ಷಾ ಕೇಂದ್ರಗಳಿಗೂ ಎಂಬೆಸ್ಸಿ ಗ್ರೂಪ್ ಸಂಸ್ಥೆಯವರು ಉಚಿತವಾಗಿ ಸ್ಯಾನಿಟೈಸರ್‍ಗಳನ್ನು ಒದಗಿಸಲಿದೆ. ವಿದ್ಯಾರ್ಥಿಗಳ ಸುರಕ್ಷತಾ ಹಿತದೃಷ್ಠಿಯಿಂದ ಬಟ್ಟೆಯಿಂದ ತಯಾರಿಸಲಾದ ಇಲ್ಲವೇ ಸರ್ಜಿಕಲ್ ಮಾಸ್ಕ್ ಗಳನ್ನು ಬಳಸಬೇಕಾಗಿರುತ್ತದೆ. ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಸುಮಾರು 1.30 ಲಕ್ಷ ಅಧಿಕಾರಿಗಳು/ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಮತ್ತುರೋಗ ಲಕ್ಷಣಗಳು ಕಂಡುಬರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎನ್.95 ಫೇಸ್ ಮಾಸ್ಕ್‍ಗಳನ್ನು ಭಾರತ್ ಸ್ಕೌಟ್&ಗೈಡ್ಸ್ ಸಂಸ್ಥೆಯು ಉಚಿತವಾಗಿ ಒದಗಿಸಲಿದೆ.


ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯವರಿಗೆ ಆ ಸಂದರ್ಭಕ್ಕೆ ಅನುಗುಣವಾಗಿ ಕೋವಿಡ್-19ರ ಆರ್.‌ಎ.ಟಿ. ಇಲ್ಲವೇ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡುವ ಕುರಿತು ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕ್ರಮ ವಹಿಸಲಿದ್ದಾರೆ. ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ವಹಿಸುವ ಮೂಲಕ, ಈ ಬಾರಿ ನಿಗದಿಯಾಗಿರುವಂತ ಜುಲೈ.19 ಮತ್ತು 22ರ ಎಸ್ ಎಸ್ ಎಲ್ ಸಿ ಪರೀಕ್ಷೆ ಕೊರೋನಾ ಭೀತಿಯ ನಡುವೆಯೂ ನಡೆಯಲಿದೆ.


ವರದಿ : ವಸಂತ ಬಿ ಈಶ್ವರಗೆರೆ

أحدث أقدم