ರಾಜ್ಯದಲ್ಲಿಂದು 1,913 ಪಾಸಿಟಿವ್, 2,489 ಡಿಸ್ಚಾರ್ಜ್, ಪಾಸಿಟಿವಿಟಿ ದರ %1.53
ಬೆಂಗಳೂರು: ಕರ್ನಾಟಕದಲ್ಲಿ ಇಂದು 1,913 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 48 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,74,597ಕ್ಕೆ ಏರಿಕೆಯಾಗಿದೆ. ಈ ಪೈಕಿ 28,04,396 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 35,944ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 2,489 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 34,234 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇಂದಿನ ಪಾಸಿಟಿವಿಟಿ ದರ 1.53%.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 1913 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 401 ಜನರಲ್ಲಿ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ 222, ಮೈಸೂರು 198, ಹಾಸನ 191, ತುಮಕೂರು 170, ಉಡುಪಿ 95, ಚಿಕ್ಕಮಗಳೂರು 89, ಕೋಲಾರ 74, ಮಂಡ್ಯ 68, ಶಿವಮೊಗ್ಗ 55, ಕೊಡಗು 46, ಬೆಳಗಾವಿ 44, ಉತ್ತರ ಕನ್ನಡ 42, ದಾವಣಗೆರೆ 36, ಚಿತ್ರದುರ್ಗ 30, ಚಾಮರಾಜನಗರ 29, ಬೆಂಗಳೂರು ಗ್ರಾಮಾಂತರ 24, ರಾಮನಗರ 18, ಬಳ್ಳಾರಿ 17, ಗದಗ 16, ಚಿಕ್ಕಬಳ್ಳಾಪುರ 15, ಧಾರವಾಡ 9, ಹಾವೇರಿ 8, ಬಾಗಲಕೋಟೆ 4, ಕೊಪ್ಪಳ 3, ರಾಯಚೂರು 3, ಬೀದರ್ 2, ಕಲಬುರಗಿ 2, ವಿಜಯಪುರ 2 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಕೇರಳದಲ್ಲಿ ಇಂದು 14539 ಪಾಸಿಟಿವ್, ಪಾಸಿಟಿವಿಟಿ 10.46%, ಇಂದು 10331 ಡಿಸ್ಚಾರ್ಜ್,
ದಕ್ಷಿಣ ಕನ್ನಡ ಜಿಲ್ಲೆಗೆ ಝಿಕಾ ವೈರಸ್ ಆತಂಕ ಕೇರಳ ಗಡಿ ಭಾಗಗಳಲ್ಲಿ ಭಾರಿ ಕಟ್ಟೆಚ್ಚರ
ಮಂಗಳೂರು: ಕೊರೊನಾ ಮಹಾಮಾರಿಯ ನಡುವೆ ಇದೀಗ ಝಿಕಾ ವೈರಸ್ ಆತಂಕ ಶುರುವಾಗಿದೆ. ಕೇರಳದಲ್ಲಿ ಈ ವೈರಸ್‌ನ ಅಟ್ಟಹಾಸ ಶುರುವಾಗಿರುವುದರಿಂದ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ಕೇರಳದ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಕೊರೊನಾ ಮಹಾಮಾರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಇದೀಗ ಕೇರಳದಲ್ಲಿ ಝಿಕಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಸದ್ಯ ಕೇರಳದಲ್ಲಿ ಝಿಕಾ ವೈರಸ್ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಘೋಷಿಸಿದೆ. ಪ್ರತಿನಿತ್ಯ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ನೂರಾರು ರೋಗಿಗಳು ಬರುತ್ತಾರೆ.
ಈ ಕಾರಣದಿಂದ ಜಿಲ್ಲೆಯ 8 ಮೆಡಿಕಲ್ ಕಾಲೇಜು, 66 ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಕೇರಳದಿಂದ ಬರುವ ಗರ್ಭಿಣಿಯರನ್ನು ಟೆಸ್ಟ್‌ಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ವಿಟ್ಲದ ಮೂರು, ಪುತ್ತೂರು ಗ್ರಾಮಾಂತರದ ಮೂರು ಮತ್ತು ಸುಳ್ಯದ ನಾಲ್ಕು ಭಾಗದಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ.
ಝಿಕಾ ವೈರಸ್ ತೀವ್ರತೆಯ ಬಗ್ಗೆ ಅಧ್ಯಯನ ನಡೆಸಲು ಈಗಾಗಲೇ ಕೇಂದ್ರ ಸರ್ಕಾರ ಕೇರಳಕ್ಕೆ ತಜ್ಞರ ತಂಡ ಕಳುಹಿಸಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕು ಹರಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗಾ ಇರಿಸಿದ್ದು, ಸಾರ್ವಜನಿಕರು ಸಹ ಮುನ್ನೆಚರಿಕೆಯನ್ನು ವಹಿಸಬೇಕಾದ ಅಗತ್ಯವಿದೆ.
ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು 'ಈಗಿನ ಸುದ್ದಿ'ಯ ಕಳಕಳಿ