ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕು: ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೈ ಅಲರ್ಟ್, ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಸೂಚನೆ

ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕು: ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೈ ಅಲರ್ಟ್, ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಸೂಚನೆ


ಮಂಗಳೂರು:
 ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಎದುರಾಗುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಅಲರ್ಟ್ ಆಗಿದೆ. ಈಗಾಗಲೇ ಕೇರಳ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಇದರ ಜೊತೆ ಝೀಕಾ ವೈರಸ್ ಅಟ್ಟಹಾಸವು ಹೆಚ್ಚಾಗಿರುವುದರಿಂದ ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಪೊಲೀಸರಿಗೆ ಸೂಚಿಸಿದ್ದಾರೆ. ಹೀಗಾಗಿ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ 16 ಹೆಚ್ಚುವರಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ತಲಪಾಡಿ, ನೆತ್ತಿಲಪದವು, ನಾರ್ಯ ಕ್ರಾಸ್, ನಂದರಪಡ್ಪು, ಮುದುಂಗಾರುಕಟ್ಟೆ, ತೌಡುಗೋಳಿ ಪ್ರದೇಶ, ಜಿಲ್ಲಾ ಪೋಲೀಸ್ ವ್ಯಾಪ್ತಿಯ ಹತ್ತು ಕಡೆಗಳಲ್ಲಿ ಸೇರಿದಂತೆ 16 ಗಡಿಗಳಲ್ಲಿ ಪ್ರಯಾಣಿಕರ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.


ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಒಬ್ರು ಎಸ್.ಐ ಉಸ್ತುವಾರಿಯಲ್ಲಿ 24 ಗಂಟೆಯು ಪೋಲಿಸರ ನಿಯೋಜನೆ ಮಾಡಲಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಪ್ರವೇಶ ಮಾಡುವ ಮಂದಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಸರ್ಟಿಫೀಕೆಟ್ ಅಥವಾ ಒಂದು ಡೋಸ್ ಲಸಿಕೆ ಪಡೆದಿರಬೇಕು. ಪ್ರತಿ ಚೆಕ್‌ಪೋಸ್ಟ್‌ನಲ್ಲಿಯೂ ಟೆಸ್ಟಿಂಗ್ ಯೂನಿಟ್ ಇದ್ದು ಸ್ಥಳದಲ್ಲೇ ಕೋವಿಡ್ ತಪಾಸಣೆ ನಡೆಸುವ ಅವಕಾಶವು ಇದೆ. ಇದರ ಹೊರತುಪಡಿಸಿ ಅನಗತ್ಯ ಪ್ರವೇಶಕ್ಕೆ ಅವಕಾಶ ಸಂಪೂರ್ಣ ನಿರಾಕರಿಸಲಾಗಿದೆ. ಇನ್ನು ರೈಲಿನ ಮೂಲಕ ಬರುವ ಪ್ರಯಾಣಿಕರ ತಪಾಸಣೆಯು ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಾಡಲಾಗುತ್ತಿದೆ. ಈಗಾಗಲೇ ಕೇರಳದಲ್ಲಿ ಕೊರೊನಾ ಜೊತೆ ಝೀಕಾ ವೈರಸ್ ಅಟ್ಟಹಾಸವು ಹೆಚ್ಚಾಗಿದ್ದು ಈವರೆಗೆ 22 ಪ್ರಕರಣ ದಾಖಲಾಗಿದೆ. ಹೀಗಾಗಿ ಕೇರಳದಿಂದ ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವ ಪ್ರತಿಯೊಬ್ಬ ರೋಗಿಯ ಪರೀಕ್ಷೆ ಸಹ ನಡೆಸಲಾಗುತ್ತಿದೆ.


ಕೇರಳ ರಾಜ್ಯದ ತಿರುವನಂತಪುರದಲ್ಲಿ ಝಿಕಾ ವೈರಸ್ ರೋಗ ಪ್ರಕರಣಗಳು ವರದಿಯಾಗುತ್ತಿದ್ದು, ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಸಾಕಷ್ಟು ಜನರು ಶಿಕ್ಷಣ, ಆರೋಗ್ಯ ಸಂಬಂಧಿ ಕಾರ್ಯಗಳಿಗೆ ಬಂದು - ಹೋಗುವುದು ಸಾಮಾನ್ಯವಾಗಿರುವುದರಿಂದ, ದ.ಕ.ಜಿಲ್ಲೆಯಲ್ಲಿ ಈ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿರುತ್ತದೆ.


ಝಿಕಾ ವೈರಸ್- ಝಿಕಾ ವೈರಸ್ ಸೋಂಕು ಹೊಂದಿರುವ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಈ ಸೊಳ್ಳೆಗಳು ತೆರೆದ ಸ್ವಲ್ಪ ನೀರಿನ ಸಂಗ್ರಹಣೆಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಇತರೆ ನೀರಿನ ಸಂಗ್ರಹಣೆಗಳು, ಹೂವಿನ ಕುಂಡಗಳು, ಮನೆಯ ಮೇಲ್ಛಾವಣಿಗಳಲ್ಲಿ ನಿಂತ ನೀರು, ಟಯರ್‌, ಘನತ್ಯಾಜ್ಯ ವಸ್ತುಗಳು, ಇತ್ಯಾದಿಗಳಲ್ಲಿ ಉತ್ಪತ್ತಿಯಾಗುತ್ತವೆ.


ಈ ಕಾರಣಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಜಿಲ್ಲಾಡಳಿತ ನಿದರ್ಶನ ನೀಡಲಾಗಿದೆ. ಕೇರಳ ರಾಜ್ಯದಿಂದ ಬರುವ ಎಲ್ಲಾ ರೋಗಿಗಳ ಬಗ್ಗೆ ನಿಗಾವಹಿಸುವುದು, ಯಾವುದೇ ಜ್ವರವಿದ್ದರೂ ಸಮೀಪದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ನಾಗರಿಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.


ಅಲ್ಲದೆ ಎಲ್ಲಾ ಸ್ಕ್ಯಾನಿಂಗ್ ಹಾಗೂ ಹೆರಿಗೆ ಆಸ್ಪತ್ರೆಗಳ ಮುಖ್ಯಸ್ಥರು ತಮ್ಮಲ್ಲಿ ದಾಖಲಾಗುವ ಗರ್ಭಿಣಿಯರಲ್ಲಿ ಅಂಗಾಂಗ ನ್ಯೂನತೆ (ಮೈಕ್ರೋ ಸಫಾಲಿ) ಕಾಣಿಸಿಕೊಂಡಿದ್ದರೆ ತಕ್ಷಣ ಸಂಬಂಧಪಟ್ಟವರ ರಕ್ತ ಪರೀಕ್ಷೆಯನ್ನು ನಡೆಸಲು ಕ್ರಮ ತೆಗೆದುಕೊಳ್ಳುವುದು ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ನಿರ್ದೇಶನ ನೀಡಲಾಗಿದೆ ಅಂತಾ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾಹಿತಿ ನೀಡಿದ್ದಾರೆ.


Previous Post Next Post