ಬೆಂಗಳೂರು: ಕೆಲ ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಿದ್ದು, ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದಾರೆ.
ಬೆಂಗಳೂರಿಲ್ಲಿ ನಡೆಯುತ್ತಿರುವ ಬಿಎಸ್‌ವೈ ಸರಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ ಭಾಷಣದ ವೇಳೆ ಕಣ್ಣೀರಿಟ್ಟಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಅಧ್ಯಕ್ಷ ಜೆ.ಪಿ ನಡ್ಡಾರವರು 75 ವರ್ಷಕ್ಕಿಂತ ಮೇಲಿನವರಿಗೆ ರಾಜಕೀಯದಲ್ಲಿ ಅವಕಾಶವಿಲ್ಲ ಎಂದಿದ್ದರು. ಆದರೆ ನನ್ನ ಮೇಲಿನ ಪ್ರೀತಿ ವಾತ್ಸಲ್ಯದ ಕಾರಣದಿಂದ ನನಗೆ ಅವಕಾಶ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಯಾರೂ ಇಲ್ಲದಾಗ ಪಕ್ಷವನ್ನು ಬಲಪಡಿಸಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೇರಬೇಕು ಎನ್ನುವುದು ನನ್ನ ಆಗ್ರಹವಾಗಿದೆ" ಎಂದು ಹೇಳಿದರು.
"ನಾನು ನನ್ನ ಆಡಳಿತದ ಎಲ್ಲಾ ಸಂದರ್ಭಗಳಲ್ಲೂ ಅಗ್ನಿಪರೀಕ್ಷೆ ಎದುರಿಸಿದ್ದೇನೆ. ನಾನು ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಸಂತೋಷದಿಂದ, ಖುಷಿಯಿಂದ ನಾನು ರಾಜೀನಾಮೆ ನೀಡಲಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಜುಲೈ 26-2019 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್ ವೈ ಇಂದಿಗೆ 2 ವರ್ಷ ಪೂರೈಸಿದ್ದಾರೆ.