ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ, ಸಿಎಂ ಬೊಮ್ಮಾಯಿ ಮಹತ್ವದ ಸಭೆ, ಸೂಚನೆ

ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ, ಸಿಎಂ ಬೊಮ್ಮಾಯಿ ಮಹತ್ವದ ಸಭೆ, ಸೂಚನೆ 


ಬೆಂಗಳೂರು: ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಹೆಚ್ಚಳವಾಗುತ್ತಿರವುದರಿಂದ ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ.


ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಿನ್ನೆ (ಶನಿವಾರ) ಸಿಎಂ ಬಸವರಾಜ ಬೊಮ್ಮಾಯಿ ಸಭೆ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.


1. ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಲಾಯಿತು. ಆಕ್ಸಿಜನ್ ಪೂರೈಕೆ, ಔಷಧಿ ಲಭ್ಯತೆ, ಮುನ್ನೆಚ್ಚರಿಕೆ ಕ್ರಮಗಳು, ಗಡಿ ಭಾಗಗಳಲ್ಲಿ ತಪಾಸಣೆ ಮೊದಲಾದ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.


2. ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು.


3. ಕೋವಿಡ್ ಎರಡನೇ ಅಲೆಯನ್ನು ಕಠಿಣ ಪರಿಶ್ರಮದಿಂದ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ನಿಯಂತ್ರಿಸಲಾಗಿದೆ. ಈಗ ಮತ್ತೆ ಪ್ರಕರಣಗಳು ಹೆಚ್ಚಳವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.


4. ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಆರ್.ಟಿ..ಪಿ.ಸಿ.ಆರ್. ನೆಗೆಟಿವ್, ಎರಡೂ ಡೋಸ್ ವ್ಯಾಕ್ಸಿನ್ ಕಡ್ಡಾಯ.


5. ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಬಿಗಿ ಮಾಡಿ. ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ. ಡಿವೈಎಸ್ ಪಿ, ಉಪ ವಿಭಾಗಾಧಿಕಾರಿ, ವೈದ್ಯರು, ಮತ್ತು ಇತರ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು.


6. ಜಿಲ್ಲಾಧಿಕಾರಿಗಳು, ಎಸ್ ಪಿ ಪ್ರತಿ ಎರಡು ದಿನಕ್ಕೊಮ್ಮೆ ಭೇಟಿ ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಬೇಕು.


7. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.


8. ಜೊತೆಗೆ ರೈಲು ನಿಲ್ದಾಣದಲ್ಲಿಯೂ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ತಿಳಿಸಿದರು. ಬಂದರುಗಳಲ್ಲಿಯೂ ಕಟ್ಟೆಚ್ಚರ ವಹಿಸಬೇಕು.


9. ಕೇರಳದಿಂದ ಶಿಕ್ಷಣ, ಉದ್ಯೋಗಕ್ಕೆಂದು ಪ್ರತಿದಿನ ಪ್ರಯಾಣಿಸುವವರಿಗೆ ಒಂದು ವಾರದ ಅವಧಿಗೆ ಪಾಸ್ ನೀಡುವ ವ್ಯವಸ್ಥೆ ಹಾಗೂ ಅವರಿಗೆ ಪ್ರತಿ ವಾರ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯ ಮಾಡುವಂತೆ ಸೂಚಿಸಿದರು. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.


10. ಹೊರ ರಾಜ್ಯದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿಯೇ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ.


11. ಚಿಕಿತ್ಸಾ ಸೌಲಭ್ಯದಲ್ಲಿ, ಆಮ್ಲಜನಕ, ಔಷಧ ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು.


12. ಆರೋಗ್ಯ ಸೌಲಭ್ಯಕ್ಕೆ ಅಗತ್ಯವಿರುವ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಯಿತು. ಅವುಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.


13. ಜಿಲ್ಲೆಗಳಿಗೆ ಹಂಚಿಕೆ ಮಾಡಿರುವ ಪಿಎಸ್‌ಎ ಘಟಕಗಳನ್ನು ತ್ವರಿತವಾಗಿ ಅಳವಡಿಸಲು ಸೂಚಿಸಲಾಯಿತು.


14. ಪಿ.ಎಸ್.ಎ ಘಟಕಗಳಿಗೆ ಅಗತ್ಯ ಸಾಮರ್ಥ್ಯದ ವಿದ್ಯುತ್ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.


15. ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಪಿಎಸ್‌ಎ ಘಟಕ ಒಂದು ವಾರದೊಳಗೆ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.


16. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗಳ ಪ್ರಮಾಣ ಹೆಚ್ಚಿಸುವಂತೆ ಸೂಚಿಸಿದರು. ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಕಾರಣ, ಹೋಮ್ ಸ್ಟೇಗಳು, ರೆಸಾರ್ಟ್ ಗಳಲ್ಲಿ ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ.


17. ಲಸಿಕೆ ಕಾರ್ಯಕ್ರಮವನ್ನು ತೀವ್ರಗೊಳಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.


18. ಸಂಪರ್ಕಿತರ ಪತ್ತೆ ತೀವ್ರಗೊಳಿಸಲು ಸೂಚಿಸಲಾಗಿದೆ.


19. ಗಡಿ ಪ್ರದೇಶದಲ್ಲಿ RAT ಪರೀಕ್ಷೆ ಹೆಚ್ಚಿಸಬೇಕು.


20. ಮೈಕ್ರೋ ಕಂಟೇನ್ ಮೆಂಟ್ ಝೋನ್ ಗಳನ್ನು ಮಾಡಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.


21. ಮಾಸ್ಕ್ ಧಾರಣೆ ಕಡ್ಡಾಯಗೊಳಿಸಬೇಕು.


22. ರೆಸಾರ್ಟ್ ಗಳಲ್ಲಿ ಅತಿಥಿಗಳಿಗೆ ಆರ್ ಟಿ ಪಿ ಸಿ ಆರ್ ಪರೀಕ್ಷಾ ವರದಿ ಕಡ್ಡಾಯಗೊಳಿಸಬೇಕು.


23. ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಜನ ಗುಂಪುಗೂಡದಂತೆ ನಿಯಂತ್ರಿಸುವಂತೆ ಸೂಚಿಸಲಾಯಿತು.



أحدث أقدم