ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ, ಭಾಷಣದ ಕೆಲವು ಪ್ರಮುಖ ಅಂಶಗಳು
ನವದೆಹಲಿ; ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆ ಮೇಲೆ ಭಾನುವಾರ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಮೋದಿಯವರು, ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಭಾಷಣೆ ವೇಳೆ ಮೋದಿಯವರು ಹಲವು ಘೋಷಣೆಗಳನ್ನು ಮಾಡಿದ್ದು, ಈ ಘೋಷಣೆಗಳ ಪ್ರಮುಖ ಅಂಶಗಳು ಇಂತಿವೆ
ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ
ನಮ್ಮ ದೇಶದ ಬಹುದೊಡ್ಡ ಗುರಿಯೆಂದರೆ ಅದು ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಅಗತ್ಯ ಅಭಿವೃದ್ಧಿ ಕಾಣುವುದು. ಇಂದು ಈ ತ್ರಿವರ್ಣ ಧ್ವಜದ ಬೆಳಕಿನಡಿಯಲ್ಲಿ ನಾನು ರಾಷ್ಟ್ರೀಯ ಹೈಡ್ರೋಜನ್ ಮಿಷನ್ ನ್ನು ಘೋಷಿಸುತ್ತಿದ್ದೇನೆಂದು ಹೇಳಿದರು.
ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶ
ಭಾಷಣದ ವೇಳೆ ಮಿಜೊರಾಮ್ ನಲ್ಲಿ ಎರಡುವರೆ ವರ್ಷಗಳ ಹಿಂದೆ ಸೈನಿಕ ಶಾಲೆಗಳಲ್ಲಿ ಬಾಲಕಿ/ಯರಿಗೆ ಪ್ರವೇಶ ನೀಡುವ ಪ್ರಯೋಗವನ್ನು ಉಲ್ಲೇಖಿಸಿ ಮಾತನಾಡಿದ ಮೋದಿಯವರು, ಎಲ್ಲಾ ಸೈನಿಕ ಶಾಲೆಗಳಲ್ಲಿಯೂ ಬಾಲಕಿ/ಯುವತಿಯರಿಗೆ ಪ್ರವೇಶ ಲಭ್ಯವಿರಲಿದೆ ಎಂದು ಘೋಷಣೆ ಮಾಡಿದರು.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆರಂಭ
ಭಾರತ ಸರ್ಕಾರವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಗಾರರಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಮೋದಿಯವರು ಹೇಳಿದ್ದಾರೆ.
ಭಾರತ ಸರ್ಕಾರವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಗಾರರಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಹಳ್ಳಿಯ ಅಭಿವೃದ್ಧಿ ಪಥವು ಹೊಸ ಆಯಾಮವನ್ನು ಪಡೆಯುತ್ತಿದೆ. ಹಳ್ಳಿಗಳಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಮಾತ್ರವೇ ಇಲ್ಲ, ಡಿಜಿಟಲ್ ಉದ್ಯಮಿಗಳೂ ರೂಪುಗೊಳ್ಳುತ್ತಿದ್ದಾರೆಂದು ತಿಳಿಸಿದರು.
25 ವರ್ಷಗಳಲ್ಲಿ ನವ ಭಾರತ ನಿರ್ಮಾಣ
ಮುಂದಿನ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಾಗುತ್ತದೆ. ಅಲ್ಲಿಯವರೆಗೆ ನಮ್ಮ ಗುರಿ ಭಾರತದ ನಿರ್ಮಾಣ ಆಗಿರಬೇಕು. ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಎನ್ನುವಂತೆ ಬೆಳೆಯಬೇಕು. ನಮ್ಮ ಎಲ್ಲಾ ಗುರಿಗಳ ಸಾಧನೆಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಬಹಳ ಮುಖ್ಯವಾಗಿದೆ.
ಪ್ರಧಾನಿ ಗತಿ ಶಕ್ತಿ ಯೋಜನೆ
ಮುಂದಿನ ದಿನಗಳಲ್ಲಿ, ಪ್ರಧಾನಿ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ, 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದ್ದು, ಈ ಯೋಜನೆ ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡಲಿದೆ ಮತ್ತು ನಮ್ಮ ಆರ್ಥಿಕತೆಗೆ ಸಮಗ್ರ ಮಾರ್ಗವನ್ನು ನೀಡುತ್ತದೆ.
75 ವಂದೇ ಭಾರತ್ ರೈಲು
ದೇಶದ 75ನೇ ಸ್ವಾತಂತ್ರೋತ್ಸವದ 75 ವಾರಗಳ ಆಚರಣೆಗೆ ಪಣತೊಟ್ಟಿದ್ದೇವೆ. 2021ರ ಮಾರ್ಚ್ 12ರಿಂದ 2023ರ ಆಗಸ್ಟ್ 15ರವರೆಗೂ 'ಅಮೃತ ಮಹೋತ್ಸವ' ನಡೆಯಲಿದೆ. ಭಾರತೀಯ ರೈಲ್ವೆ ಸಹ ದೇಶದ ಜೊತೆಗೆ ಮಹತ್ತರ ಪರಿವರ್ತನೆಯನ್ನು ಕಂಡಿದೆ. 75 ವಂದೇ ಭಾರತ್ ರೈಲುಗಳು ಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ 75 ವಾರಗಳಲ್ಲಿ ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸಲಿದೆ.
2030 ಹೊತ್ತಿಗೆ ರೈಲ್ವೆಯಲ್ಲಿ ಶೂನ್ಯ ಮಾಲಿನ್ಯ ನಿರ್ಮಾಣ
2030 ಹೊತ್ತಿಗೆ ರೈಲ್ವೆಯಲ್ಲಿ ಶೂನ್ಯ ಮಾಲಿನ್ಯ ನಿರ್ಮಾಣ ಮಾಡಲು ಪಣ ತೊಡಲಾಗಿದೆ. ನ್ಯಾಷನಲ್ ಹೈಡ್ರೋಜನ್ ಘೋಷಣೆ ಮಾಡುತ್ತಿದ್ದೇನೆ. ಈ ತ್ರಿವರ್ಣ ಧ್ವಜ ಸಾಕ್ಷಿಯಾಗಿಟ್ಟು ಘೋಷಣೆ ಮಾಡುತ್ತಿದ್ದೇನೆ. ಭಾರತವನ್ನು ಹೈಡ್ರೋಜನ್ ರಫ್ತು ಮಾಡುವ ಹಬ್ ಮಾಡಲಾಗುತ್ತದೆ.
ಸಬ್‌ಕಾ ಸಾತ್ ಸಬ್‌ಕಾ ವಿಕಾಸ್- ಸಬ್‌ಕಾ ವಿಶ್ವಾಸ್ ಸಬ್‌ಕಾ ಪ್ರಯಾಸ್
ಸಬ್‌ಕಾ ಸಾತ್ ಸಬ್‌ಕಾ ವಿಕಾಸ್- ಸಬ್‌ಕಾ ವಿಶ್ವಾಸ್'ನಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿದ್ದೇವೆ. ನಮ್ಮ ಎಲ್ಲರ ಗುರಿಯನ್ನು ಸಾಧಿಸಲು 'ಸಬ್‌ಕಾ ಸಾತ್ ಸಬ್‌ಕಾ ವಿಕಾಸ್-ಸಬ್‌ಕಾ ವಿಶ್ವಾಸ್ ಮತ್ತು ಸಬ್‌ಕಾ ಪ್ರಯಾಸ್ - ಎಲ್ಲರ ಜೊತೆ, ಎಲ್ಲರ ಏಳ್ಗೆ- ಎಲ್ಲರ ಪ್ರಯತ್ನ' ಅತ್ಯಗತ್ಯವಾಗಿದೆ ಎಂದು ನಾನು ಈಗ ಘೋಷಣೆ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ.
ಬಡವರಿಗೆ ನೀಡುವ ಅಕ್ಕಿಯ ಪೌಷ್ಟಿಕತೆ ಹೆಚ್ಚಿಸುತ್ತೇವೆ
ಬಡವರಿಗೆ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಸರ್ಕಾರ ನೀಡಲಿದೆ. ಪಡಿತರ ಅಂಗಡಿಯಲ್ಲಿ ಸಿಗುವ ಅಕ್ಕಿ ಇರಲಿ, ಮಧ್ಯಾಹ್ನ ಊಟಕ್ಕೆ ಲಭ್ಯವಾಗುವ ಅಕ್ಕಿ ಇರಲಿ, ಪ್ರತಿ ಯೋಜನೆಯಿಂದ ಲಭ್ಯವಾಗುವ ಅಕ್ಕಿಯ ಗುಣಮಟ್ಟವನ್ನೂ 2024ರ ವೇಳೆಗೆ ಹೆಚ್ಚಿಸಲಾಗುವುದು ಎಂದರು.