ಟೋಕಿಯೊ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಐತಿಹಾಸಿಕ ತೆರೆ

ಟೋಕಿಯೊ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಐತಿಹಾಸಿಕ ತೆರೆ 

ಟೋಕಿಯೋ: ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬ ಟೋಕಿಯೋ ಒಲಿಂಪಿಕ್ಸ್‌ಗೆ ವರ್ಣರಂಜಿತ ನಯನ ಮನೋಹರ ಸಮಾರಂಭದೊಂದಿಗೆ ಅಂತಿಮ ತೆರೆ ಬಿದ್ದಿದೆ. 16 ದಿನಗಳ ಕಾಲ ನಡೆದ ಕ್ರೀಡಾಕೂಟವು ಸಮಾಪ್ತಿಗೊಂಡಿತು. ಜುಲೈ 23ರಿಂದ ಆಗಸ್ಟ್ ೮ರವರೆಗೆ ನಡೆದ ಒಲಿಂಪಿಕ್ಸ್ ಅನೇಕ ವಿಶ್ವದಾಖಲೆಗಳು ಮತ್ತು ಚಾರಿತ್ರಿಕ ಸಾಧನೆಗಳಿಗೆ ಸಾಕ್ಷಿಯಾಯಿತು. ಸೋಲು-ಗೆಲುವು, ನೋವು-ನಲಿವು, ನಿರಾಸೆ-ಭರವಸೆ ಇವುಗಳ ಒಟ್ಟು ಫಲಿತಾಂಶದಂತಿದ್ದ ಟೋಕಿಯೋ ಕ್ರೀಡಾ ಕುಂಭಮೇಳ ಉದಯೋನ್ಮುಖ ತಾರೆಯರಿಗೂ ಸ್ಛೂರ್ತಿಯ ಚಿಮ್ಮು ಹಲಗೆಯಾಯಿತು.


ಆಸ್ಟ್ರೇಲಿಯಾದ ಎಮ್ಮಾ ಮ್ಯಾಕಿೋಂನ್ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಪದಕಗಳನ್ನು ಗಳಿಸಿ ನೂತನ ವಿಶ್ವದಾಖಲೆ ಸೃಷ್ಟಿಸಿದ್ದು ವಿಶೇಷವಾಗಿತ್ತು. ಭಾರತದ ಚಿನ್ನದಂಥ ಮಗ ನೀರಜ್ ಚೋಪ್ರಾ ಈ ಕ್ರೀಟಾ ಹಬ್ಬದಲ್ಲಿ ಭಾರತಕ್ಕೆ ಜಾವೆಲಿನ್ ಎಸೆತದಲ್ಲಿ ಬಂಗಾರದ ಉಡುಗೊರೆ ನೀಡಿ ಐತಿಹಾಸಿಕ ದಾಖಲೆ ಬರೆದರು.


ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟಗಳಿಗೆ ಹೋಲಿಸಿದಲ್ಲಿ ಭಾರತದ ಸಾಧನೆ ಗಮನಾರ್ಹ. ಇದೇ ಮೊದಲ ಬಾರಿಗೆ ಭಾರತ ಸಪ್ತಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದೆ


ಬ್ರೆಜಿಲ್‌ನಲ್ಲಿ ನಡೆದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಬೆಳ್ಳಿ ಸೇರಿದಂತೆ ಕೇವಲ ಎರಡು ಪದಕಗಳನ್ನು ಗಳಸಲಷ್ಟೇ ಶಕ್ತವಾಗಿತ್ತು. ಈಗ ಭಾರತದ ಸಾಧನೆ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮತ್ತು ಕುಸ್ತಿ ಪಟು ರವಿಕುಮಾರ್ ದಹಿಯಾ ಅವರ ಬೆಳ್ಳಿ ಸಾಧನೆ ಹೆಮ್ಮೆಪಡುವಂಥದ್ದು. ಇದರ ಜೊತೆಗೆ ಬ್ಯಾಡ್ಮಿಂಟನ್ ಆಟಗಾತಿ ಪಿ.ವಿ.ಸಿಂಧು, ಬಾಕ್ಸರ್ ಲವ್ಲೀನಾ ಬೋರ್ಗೆಹೈನ್, ಪುರುಷರ ಹಾಕಿ ತಂಡ ಮತ್ತು ಕುಸ್ತಿಪಟು ಭಜರಂಗ್ ಪುನಿಯಾ ದೇಶಕ್ಕೆ ಕಂಚು ಪದಕ ದಕ್ಕಿಸಿಕೊಟ್ಟು ಗಮನಸೆಳೆದರು.


ನಾಲ್ಕು ದಶಕಗಳ ಬಳಿಕ ಪುರುಷರ ಹಾಕಿ ತಂಡದ ಸಾಧನೆ ಪುನರಾವರ್ತನೆ ಮಾಡುವಲ್ಲಿ ವಿಫಲರಾದ ಭಾರತ ವನಿತೆಯರ ವಿರೋಚಿತ ಸೋಲು ಕಂಡರೂ ಉತ್ತಮ ಪ್ರದರ್ಶನದೊಂದಿಗೆ ದೇಶದ ಮೆಚ್ಚುಗೆಗೆ ಪಾತ್ರವಾದರು. ಮಹಿಳೆಯರ ಗಾಲ್ಛ್ ಪಂದ್ಯದಲ್ಲಿ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಕೂದಲೆಳೆ ಅಂತರದಲ್ಲಿ ಕಂಚು ಪದಕದಿಂದ ವಂಚಿತರಾಗಿ ೪ನೇ ಸ್ಥಾನ ಗಳಿಸಿದ್ದು ಕೂಡ ಅಮೋಘ ಸಾಧನೆಯೇ. ಈ ಸ್ಥಾನಕ್ಕೇರಿದ ಭಾರತದ ಪ್ರಥಮ ಮಹಿಳಾ ಗಾಲ್ಛರ್ ಎಂಬ ಹೆಗ್ಗಳಿಕೆಗೆ ಅದಿತಿ ಪಾತ್ರರಾದರು.


ಈ ಬಾರಿ ಪದಕ ಪಟ್ಟಿಯಲ್ಲಿ ಅತಿ ಹೆಚ್ಚು ಬಂಗಾರದ ಪದಕಗಳನ್ನು ಗೆಲ್ಲುವುದರೊಂದಿಗೆ ಅಮೆರಿಕ ಅಗ್ರಸ್ಥಾನದಲ್ಲಿದೆ. ಚೀನಾ, ಜಪಾನ್, ಬ್ರಿಟನ್ ಮತ್ತು ರಷ್ಯಾ ನಂತರದ ಸ್ಥಾನಗಳಲ್ಲಿದೆ.


ಜುಲೈ 23ರಂದು ಜಪಾನ್ ಚಕ್ರವರ್ತಿ ನರುಹೀಟೋ ಚಾಲನೆ ನೀಡಿದರು. ವಿವಿಧ ದೇಶಗಳ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿ ಪರಂಪರೆಗಳನ್ನು ಸಾರುವ ಚಿತ್ತಾಕರ್ಷಕ ಕಾರ್ಯಕ್ರಮಗಳೊಂದಿಗೆ ಉದಯರವಿ ನಾಡು ಜಪಾನ್ ರಾಜಧಾನಿ ಟೋಕಿಯೋ ನಗರಿಯ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ 32ನೇ ಒಲಿಂಪಿಕ್ಸ್ ಕ್ರೀಡಾಕೂಟ ವಿಧ್ಯುಕ್ತವಾಗಿ ಚಾಲನೆಗೊಂಡಿತು. ಒಟ್ಟು 208 ದೇಶಗಳು ಪ್ರತಿನಿಧಿನಿಧಿಸಿದ್ದ ಟೋಕಿಯೋ ಒಲಿಂಪಿಕ್‌ನಲ್ಲಿ 33 ಕ್ರೀಡೆಗಳು ನಡೆದು ಒಟ್ಟು 15,400 ಸ್ಪರ್ಧಿಗಳು ಪದಕಗಳಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಭಾರತದ 127 ಕ್ರೀಡಾಪಟುಗಳು ತಮ್ಮ ಶಕ್ತಿ-ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದರು.


ಈ ಸಮಾರಂಭದಲ್ಲಿ ಕ್ರೀಡಾ ಧ್ವಜವನ್ನು 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಅತಿಥ್ಯ ವಹಿಸುವ ಫ್ರಾನ್ಸ್‌ಗೆ ನೀಡಲಾಯಿತು. ಇದೇ ತಿಂಗಳು 28ರಿಂದ ಆರಂಭವಾಗಲಿರುವ ಪ್ಯಾರಾಂಪಿಕ್ಸ್‌ಗೂ ಟೋಕಿಯೋ ಅತಿಥ್ಯ ವಹಿಸಲಿದ್ದು, ಭಾರತದ ಸ್ಪರ್ಧಿಗಳೂ ಸಹ ಪದಕಗಳಿಗೆ ಸೆಣಸಲಿದ್ದಾರೆ.
Previous Post Next Post