ಹೊಸ ವರ್ಷಾಚರಣೆಯ ಮೇಲೆ ಒಮಿಕ್ರಾನ್ ಕರಿನೆರಳು: ಇಂದು ಸಂಜೆ 6ರಿಂದ ನಾಳೆ ಬೆಳಗ್ಗೆ 5ರ ವರೆಗೆ ಬೆಂಗಳೂರು ನಗರದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಜಾರಿ

ಹೊಸ ವರ್ಷಾಚರಣೆಯ ಮೇಲೆ ಒಮಿಕ್ರಾನ್ ಕರಿನೆರಳು: ಇಂದು ಸಂಜೆ 6ರಿಂದ ನಾಳೆ ಬೆಳಗ್ಗೆ 5ರ ವರೆಗೆ ಬೆಂಗಳೂರು ನಗರದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಜಾರಿ


ಬೆಂಗಳೂರು
: ಕೊರೋನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ.


ಇದರಂತೆ ಡಿಸೆಂಬರ್ 31ರ ಸಂಜೆ 6ರಿಂದ ಮುಂಜಾನೆ 5ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ 5ಕ್ಕಿಂತ ಹೆಚ್ಚು ಜನ ಸೇರಿ ಹೊಸ ವರ್ಷದ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡದಂತೆ ನಿಷೇಧ ಹೇರಿದೆ.


ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದು, ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಅನ್ವಯವಾಗುವಂತೆ ನಗರದ ಸಾರ್ವಜನಿಕ ಸ್ಥಳಗಳು, ಪಾರ್ಕ್ ಮೈದಾನ ಸೇರಿದಂತೆ ಇದರೆ ಸಾರ್ವಜನಿಕ ಜಾಗಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.


ಮನೆಗಳು, ವಸತಿ ಸಂಕೀರ್ಣಗಳು, ಖಾಸಗಿ ಕ್ಲಬ್ ಗಳಲ್ಲಿ ಸಾರ್ವಜನಿಕರು ಅಥವಾ ಸದಸ್ಯರು ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ.


ಹೋಟೆಲ್, ಪಬ್, ಕ್ಲಬ್, ಮಾಲ್, ರೆಸ್ಟೋರಂಟ್ ಗಳಲ್ಲಿ ಯಾವುದೇ ಡಿಜೆ ಕಾರ್ಯಕ್ರಮ, ನೃತ್ಯ, ಸಂಗೀತ ಗಾಯನ, ಬ್ಯಾಂಡ್ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜನೆ ನಿಷೇಧಿಸಲಾಗಿದೆ. ಇನ್ನು ರಾತ್ರಿ 10ರವರೆಗೆ ಹೋಟೆಲ್, ಪಬ್, ಕ್ಲಬ್, ರೆಸ್ಟೋರೆಂಟ್, ಮಾಲ್ ಗಳು ಕಡ್ಡಾಯವಾಗಿ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸರ್ಕಾರ ಸೂಚಿಸಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.


ಒಂದು ವೇಳೆ ಆದೇಶ ಹಾಗೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದೇ ಆದರೆ, ವಿಪತ್ತು ನಿರ್ವಹಣೆ ಕಾಯ್ದೆ ಹಾಗೂ ಸಾಂಕ್ರಾಮಿ ರೋಗ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.



Previous Post Next Post