ರಾಜ್ಯದಲ್ಲಿ ಒಮಿಕ್ರಾನ್ ಆತಂಕ: ಸದ್ಯಕ್ಕೆ ಚಿತ್ರಮಂದಿರ, ಹೋಟೆಲ್, ಮಾಲ್ ಬಂದ್ ಇಲ್ಲ: ಸಚಿವ ಡಾ. ಅಶ್ವಥ್ ನಾರಾಯಣ

ರಾಜ್ಯದಲ್ಲಿ ಒಮಿಕ್ರಾನ್ ಆತಂಕ: ಸದ್ಯಕ್ಕೆ ಚಿತ್ರಮಂದಿರ, ಹೋಟೆಲ್, ಮಾಲ್ ಬಂದ್ ಇಲ್ಲ: ಸಚಿವ ಡಾ. ಅಶ್ವಥ್ ನಾರಾಯಣ 


ಬೆಂಗಳೂರು, ಡಿ.2: ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ತಳಿ ಒಮೈಕ್ರಾನ್ ಆತಂಕ ಸೃಷ್ಟಿಸಿರುವುದು ನಿಜವಾದರೂ ಸದ್ಯಕ್ಕೆ ರಾಜ್ಯದಲ್ಲಿ ಚಿತ್ರಮಂದಿರ, ಹೊಟೇಲ್ ಮತ್ತು ಮಾಲ್‍ಗಳನ್ನು ಮುಚ್ಚುವುದಿಲ್ಲ. ಆದರೆ, ಇಂತಹ ಸ್ಥಳಗಳಿಗೆ ಹೋಗುವವರಿಗೆ ಸದ್ಯದಲ್ಲೇ ಲಸಿಕೆ ಕಡ್ಡಾಯ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.


ಇತ್ತೀಚೆಗೆ ವೈದ್ಯರನ್ನು ಕುರಿತು ನಿರ್ಮಿಸಿ, ಬಿಡುಗಡೆ ಮಾಡಿರುವ `ಪ್ರೇಮಂ ಪೂಜ್ಯಂ' ಚಿತ್ರದ ನಾಯಕ ನಟ ಪ್ರೇಮ್ ಗುರುವಾರ ತಮ್ಮನ್ನು ನಗರದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ ನಾರಾಯಣ, ಸದ್ಯಕ್ಕೆ ಯಾವುದೇ ವಲಯದ ಚಟುವಟಿಕೆಗಳನ್ನು ನಿಬರ್ಂಧಿಸುವ ಚಿಂತನೆ ಸರಕಾರಕ್ಕಿಲ್ಲ ಎಂದರು.


ಒಮೈಕ್ರಾನ್ ವೈರಾಣುವಿನಿಂದ ಜೀವಕ್ಕೇನೂ ಅಪಾಯವಿಲ್ಲ. ಆದರೆ ಮುಂಜಾಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದುವರೆಗೂ ಒಂದೂ ಲಸಿಕೆಯನ್ನು ಪಡೆದುಕೊಳ್ಳದೆ ಇರುವವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಸರಕಾರ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದರೆ, ಅನಗತ್ಯ ಭಯ-ಭೀತಿಗಳು ಬೇಡ ಎಂದು ಅವರು ಹೇಳಿದರು.


ಚಿತ್ರಮಂದಿರ, ಹೊಟೇಲ್, ಮಾಲ್‍ಗಳಂತಹ ಜನಸಂದಣಿ ಸ್ಥಳಗಳು ಸೇರಿದಂತೆ ಎಲ್ಲೆಡೆಗಳಿಗೂ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೋಗಬೇಕು. ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿರುವ 11 ದೇಶಗಳ ಪರಿಸ್ಥಿತಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಇವರ ಪರೀಕ್ಷಾ ವರದಿಗಳನ್ನು ಜಿನೋಮ್ ಸೀಕ್ವೆನ್ಸ್‍ಗೆ ಕಳಿಸಲಾಗಿದ್ದು, ಸಂಬಂಧಿಸಿದ ವ್ಯಕ್ತಿಗಳನ್ನು ಪ್ರತ್ಯೇಕ ವಾಸದಲ್ಲಿಡಲಾಗಿದೆ. ಅಂತಿಮ ಫಲಿತಾಂಶ ನೆಗೆಟಿವ್ ಆಗಿ ಬಂದರೆ ಮಾತ್ರ ಇವರನ್ನು ಮನೆಗೆ ಕಳುಹಿಸಿ ಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದ್ದು, ನೆಗೆಟಿವ್ ಬಂದವರಿಗೆ ಮಾತ್ರ ರಾಜ್ಯದೊಳಕ್ಕೆ ಪ್ರವೇಶಾನುಮತಿ ನೀಡಲಾಗುವುದು. ಈ ಆತಂಕದ ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವ ಮತ್ತು ಜೀವನ ಉಳಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಅಶ್ವತ್ಥ ನಾರಾಯಣ ನುಡಿದರು.


ಒಮೈಕ್ರಾನ್ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನಮಂಡಲದ ಅಧಿವೇಶನವನ್ನು ಕೂಡ ರದ್ದುಪಡಿಸಬೇಕೆಂದು ವಿಧಾನಸೌಧ ಸಚಿವಾಲಯ ಸಲಹೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭಾಪತಿಯೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Previous Post Next Post