ಮುಂಗಡಪತ್ರದ ಚಾರಿತ್ರಿಕ ವಿಶೇಷಗಳು: 1860 ರಲ್ಲೇ ದೇಶದ ಮೊದಲ ಬಜೆಟ್ ಮಂಡನೆ

ಮುಂಗಡಪತ್ರದ ಚಾರಿತ್ರಿಕ ವಿಶೇಷಗಳು: 1860 ರಲ್ಲೇ ದೇಶದ ಮೊದಲ ಬಜೆಟ್ ಮಂಡನೆ  


ನವದೆಹಲಿ: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಫೆ.1ರಂದು ಇಂದು ತಮ್ಮ ಸತತ ನಾಲ್ಕನೇ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.


ಈ ವೇಳೆ ಅವರು ಹಲವು ಆರ್ಥಿಕ ಸುಧಾರಣೆಗಳು, ತೆರಿಗೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮುಂಗಡಪತ್ರದ ಕುರಿತು ಕೆಲವು ಚಾರಿತ್ರಿಕ, ಮಹತ್ವದ ಸಂಗತಿಗಳು ಇಲ್ಲಿವೆ.


ಮೊದಲ ಮುಂಗಡಪತ್ರ: 

ನಿಮಗೆ ಗೊತ್ತಿರಲಿ ಭಾರತದಲ್ಲಿ ಮೊದಲು ಮುಂಗಡಪತ್ರ ಮಂಡನೆಯಾಗಿದ್ದು 1860, ಏ.7ರಂದು. ಸ್ಕಾಟ್ಲೆಂಡ್‌ನ‌ ಅರ್ಥಶಾಸ್ತ್ರಜ್ಞ, ಈಸ್ಟ್‌ ಇಂಡಿಯಾ ಕಂಪನಿಗೆ ಸೇರಿದ್ದ ಜೇಮ್ಸ್‌ ವಿಲ್ಸನ್‌, ಅಂದಿನ ಬ್ರಿಟನ್‌ ರಾಣಿಗೆ ಇದನ್ನು ಸಲ್ಲಿಸಿದ್ದರು.



ಸ್ವತಂತ್ರ ಭಾರತದ ಮುಂಗಡಪತ್ರ: 

ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947, ಆ.15ರಂದು. ಅದೇ ವರ್ಷ ನ.26ರಂದು ಅಂದಿನ ವಿತ್ತಮಂತ್ರಿ ಆರ್‌.ಕೆ.ಷಣ್ಮುಖಮ್‌ ಚೆಟ್ಟಿ ಸ್ವತಂತ್ರ ಭಾರತದ ಮೊದಲ ಮುಂಗಡಪತ್ರ ಮಂಡಿಸಿದರು.



ದೀರ್ಘ‌ ಭಾಷಣ: 

ಮುಂಗಡಪತ್ರದ ಕುರಿತು ದೀರ್ಘ‌ ಭಾಷಣ ಮಾಡಿದ ದಾಖಲೆಯಿರುವುದು ನಿರ್ಮಲಾ ಸೀತಾರಾಮನ್‌ ಹೆಸರಿನಲ್ಲಿ. 2020-21ರ ಮುಂಗಡಪತ್ರವನ್ನು 2020, ಫೆ.1ರಂದು ಮಂಡಿಸುವಾಗ ಅವರು 2 ಗಂಟೆ 42 ನಿಮಿಷ ಮಾತನಾಡಿದ್ದರು. ಅಷ್ಟಾದರೂ ಇನ್ನೂ ಎರಡು ಪುಟ ಓದುವುದು ಬಾಕಿಯಿತ್ತು!



ಬದಲಾದ ಸಮಯ: 

1999ರವರೆಗೆ ಬ್ರಿಟಿಷ್‌ ಪದ್ಧತಿಯಂತೆ, ಫೆಬ್ರವರಿ ತಿಂಗಳ ಕೊನೆಯ ಕೆಲಸದ ದಿನದ ಸಂಜೆ 5 ಗಂಟೆಗೆ ಮುಂಗಡಪತ್ರ ಮಂಡಿಸಲಾಗುತ್ತಿತ್ತು. 1999ರಲ್ಲಿ ಯಶ್ವಂತ್‌ ಸಿನ್ಹಾ ಇದನ್ನು ಬದಲಿಸಿ ಬೆ.11ಕ್ಕೆ ಆರಂಭಿಸಿದರು. ಅರುಣ್ ಜೇಟ್ಲಿ 2017ರಿಂದ ದಿನಾಂಕವನ್ನೂ ಬದಲಿಸಿ ಫೆ.1ಕ್ಕೇ ಮಂಡನೆ ಶುರು ಮಾಡಿದರು.



ರೈಲ್ವೇ ಮುಂಗಡಪತ್ರ ನಿಂತುಹೋಯ್ತು: 

2017ರವರೆಗೆ ಪ್ರತ್ಯೇಕವಾಗಿ ರೈಲ್ವೇ ಮುಂಗಡಪತ್ರವನ್ನು ಮಂಡಿಸಲಾಗುತ್ತಿತ್ತು. 2017ರಲ್ಲಿ ಇದನ್ನು ಮುಖ್ಯ ಪತ್ರದೊಂದಿಗೆ ವಿಲೀನ ಮಾಡಲಾಯಿತು.



ಕಾಗದರಹಿತ: 2021-22ರ ಮುಂಗಡಪತ್ರವನ್ನು ಮೊದಲ ಬಾರಿ ಪೂರ್ಣ ಕಾಗದ ರಹಿತವನ್ನಾಗಿಸಲಾಯಿತು!



ಅಂಕಿಗಳು: 18,650

ಮುಂಗಡಪತ್ರ ಭಾಷಣದ ವೇಳೆ ಗರಿಷ್ಠ ಪದ ಬಳಕೆ ಮಾಡಿದ್ದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌. 1991ರಲ್ಲಿ ಅವರು ವಿತ್ತಸಚಿವರಾಗಿದ್ದಾಗ 18,650 ಪದ ಬಳಸಿದ್ದರು.



800
ಅತ್ಯಂತ ಕಿರು ಮುಂಗಡಪತ್ರ ಭಾಷಣ ಮಾಡಿದ್ದು ಹೀರೂಭಾಯಿ ಮಲ್ಜಿಭಾಯಿ ಪಟೇಲ್‌. 1977ರಲ್ಲವರು ಕೇವಲ 800 ಪದಬಳಕೆ ಮಾಡಿದ್ದರು.



10
ಗರಿಷ್ಠ ಬಾರಿ ಮುಂಗಡಪತ್ರ ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಹೆಸರಿನಲ್ಲಿದೆ. ಅವರು 1962ರಿಂದ 69ರ ನಡುವೆ 10 ಬಾರಿ ಮುಂಗಡಪತ್ರ ಮಂಡಿಸಿದ್ದಾರೆ.
Previous Post Next Post