ಭಾಷಣದ ಮಧ್ಯೆ ಕೈಕೊಟ್ಟ ಟೆಲಿಪ್ರಾಂಪ್ಟರ್, ಕಕ್ಕಾಬಿಕ್ಕಿಯಾದ ಪ್ರಧಾನಿ ಮೋದಿ, ವೀಡಿಯೋ ವೈರಲ್

ಭಾಷಣದ ಮಧ್ಯೆ ಕೈಕೊಟ್ಟ ಟೆಲಿಪ್ರಾಂಪ್ಟರ್, ಕಕ್ಕಾಬಿಕ್ಕಿಯಾದ ಪ್ರಧಾನಿ ಮೋದಿ, ವೀಡಿಯೋ ವೈರಲ್

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸೋಮವಾರ ವರ್ಲ್ಡ್ ಇಕನಾಮಿಕ್ ಫೋರಂನಲ್ಲಿ ವರ್ಚುವಲ್ ಆಗಿ ಭಾಷಣ ನೀಡುತ್ತಿರುವ ವೇಳೆ ಅವರ ಟೆಲಿಪ್ರಾಂಪ್ಟರ್ ಕೈಕೊಟ್ಟ ಕಾರಣ ಅವರು ಗಲಿಬಿಲಿಕ್ಕೀಡಾಗಿ ಮಾತನಾಡಲು ತಡವರಿಸಿದ ವೀಡಿಯೋ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಾಜಿಕ ತಾಣದಾದ್ಯಂತ ವ್ಯಂಗ್ಯಕ್ಕೆ ಗುರಿಯಾಗಿದೆ.


ವರ್ಲ್ಡ್ ಇಕನಾಮಿಕ್ ಫೋರಂನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಅವರು ಮೋದಿ ಅವರ ರಕ್ಷಣೆಗೆ ಬಂದರಾದರೂ ಮೋದಿ ಗಲಿಬಿಲಿಗೊಂಡಿರುವ ವೀಡಿಯೋ ವೈರಲ್ ಆಗಿದ್ದು ಅವರೊಬ್ಬ ಮಹಾನ್ ವಾಗ್ಮಿ ಎಂಬ ಅವರ ಇಮೇಜ್ ಅನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಿಗರು ಪ್ರಧಾನಿಯನ್ನು ಪ್ರಶ್ನಿಸುತ್ತಿದ್ದಾರೆ.


ಮೋದಿ ಅವರ ವರ್ಚುವಲ್ ಭಾಷಣದ ವೇಳೆ ಅತ್ತ ಜಿನೀವಾದಲ್ಲಿ ಕ್ಲಾಸ್ ಅವರು ಜತೆಗೂಡಿದ್ದರು. ತಮ್ಮ ಸಿದ್ಧಪಡಿಸಿದ್ದ ಭಾಷಣವನ್ನು ಮೋದಿ ಆರಂಭಿಸಿ ಕೆಲವೇ ನಿಮಿಷಗಳಾಗುತ್ತಿದ್ದಂತೆಯೇ ಟೆಲಿಪ್ರಾಂಪ್ಟರ್ ಕೈಕೊಟ್ಟಿತ್ತು.


"ಭಾರತವು ಮನುಕುಲಕ್ಕೆ ಭರವಸೆಯ ಗುಚ್ಛವನ್ನು ನೀಡಿದೆ. ಇದರಲ್ಲಿ ಭಾರತೀಯರು ಪ್ರಜಾಪ್ರಭುತ್ವದಲ್ಲಿರಿಸಿರುವ ಅಚಲ ವಿಶ್ವಾಸವಿದೆ. ಈ ಗುಚ್ಛದಲ್ಲಿ 21ನೇ ಶತಮಾನವನ್ನು ಮುನ್ನಡೆಸುತ್ತಿರುವ ತಂತ್ರಜ್ಞಾನವಿದೆ. ಈ ಗುಚ್ಛದಲ್ಲಿ ನಮ್ಮ ಭಾರತೀಯರ ಚಿಂತನೆ ಮತ್ತು ಪ್ರತಿಭೆಯಿದೆ, ಇದು..." ಎನ್ನುತ್ತಿದ್ದಂತೆಯೇ ಟೆಲಿಪ್ರಾಂಪ್ಟರ್ ಕೈಕೊಟ್ಟಿತ್ತು, ಆಗ ಪ್ರಧಾನಿ ತಮ್ಮ ಎಡಬದಿಯ ಟೆಲಿಪ್ರಾಂಪ್ಟರ್ ಅನ್ನು ಒಮ್ಮೆ ನೋಡಿ ಗಲಿಬಿಲಿಗೊಂಡರು.


ಮಹತ್ವದ ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಹೀಗಾಗಿರುವುದು ಅವರನ್ನು ವಸ್ತುಶಃ ಮುಜುಗರಕ್ಕೆ ತಳ್ಳಿತು. ಆಗ ಎಲ್ಲರಿಗೂ ನನ್ನ ಮಾತುಗಳು ಕೇಳಿಸುತ್ತಿವೆಯೇ ಎಂದು ಮೋದಿ ತಡವರಿಸಿ ಕೇಳಿದರು. ಆಗ ಶ್ವಾಬ್ ಅವರು ಮೋದಿಯ ರಕ್ಷಣಗೆ ಬಂದರು. ಸ್ವಲ್ಪ ನಂತರ ಮೋದಿ ತಮ್ಮ ಭಾಷಣ ಆರಂಭಿಸಿದರೂ ಮತ್ತೆ ಮೊದಲಿನಿಂದಲೇ ಭಾಷಣ ಆರಂಭಿಸಿದ್ದರು.


ಈ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, "ಪ್ರಧಾನಿಯ ಸುಳ್ಳನ್ನು ಟೆಲಿ ಪ್ರಾಂಪ್ಟರ್‌ ಗೂ ಸಹಿಸಲಾಗಲಿಲ್ಲ" ಎಂದಿದ್ದಾರೆ. "ಒಬ್ಬ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಟೆಲಿ ಪ್ರಾಂಪ್ಟರ್‌ ಕೈಕೊಟ್ಟರೆ ಭಾಷಣ ಮುಂದುವರಿಸುವುದು ಬಿಡಿ ಒಂದು ಪದವನ್ನೂ ಉಚ್ಛರಿಸಲು ಸಾಧ್ಯವಿಲ್ಲ ಎನ್ನುವುದು ನಿಜಕ್ಕೂ ನಾಚಿಗೇಡು" ಎಂದು ವ್ಯಕ್ತಿಯೋರ್ವರು ಟ್ವೀಟ್‌ ಮಾಡಿದ್ದಾರೆ. ಸದ್ಯ ಟ್ವಿಟರ್‌ ನಲ್ಲಿ #teleprompterpm ವೈರಲ್‌ ಆಗಿದೆ.



أحدث أقدم