ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಏನಿರುತ್ತೆ? ಏನಿರಲ್ಲ?

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಏನಿರುತ್ತೆ? ಏನಿರಲ್ಲ? 


ಬೆಂಗಳೂರು, ಜ. 8: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ರೂಪಾಂತರಿ ಒಮೈಕ್ರಾನ್ ಸೇರಿದಂತೆ ಕೋವಿಡ್ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಸೋಂಕು ತಡೆಗೆ ಸರಕಾರ ಹೇರಿರುವ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿದ್ದು, ಸೋಮವಾರ (ಜ.10) ಬೆಳಗ್ಗೆ 5ಗಂಟೆಯ ವರೆಗೆ ಜನಜೀವನ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆಗಳಿವೆ.


ಎಲ್ಲ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳು (ಕೋವಿಡ್ ತುರ್ತು ಸೇವೆ) ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಲಿವೆ. ಎಲ್ಲ ಸಾರ್ವಜನಿಕ ಪಾರ್ಕ್‍ಗಳನ್ನು ಬಂದ್ ಮಾಡಲಾಗುತ್ತದೆ. ಕೈಗಾರಿಕೆಗಳು ಮತ್ತು ಐಟಿ ಉದ್ಯಮಗಳ ಉದ್ಯೋಗಗಳ ಸಂಚಾರಕ್ಕೆ ವಾರಾಂತ್ಯದ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿದೆ. ಆದರೆ, ಅವರು ಕಾರ್ಖಾನೆ ಮತ್ತು ಕಂಪೆನಿ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.


ತುರ್ತು ಆರೋಗ್ಯ ಸೇವೆಗಳಿಗೆ ತೆರಳುವವರಿಗೆ ಕರ್ಫ್ಯೂವಿನಿಂದ ವಿನಾಯಿತಿ ಇದ್ದು, ಆಹಾರ, ಹಣ್ಣು, ತರಕಾರಿ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮಾಂಸ, ಮೀನು, ಮೊಟ್ಟೆ, ಇ-ಕಾಮರ್ಸ್, ಹೊಟೇಲ್, ರೆಸ್ಟೋರೆಂಟ್‍ಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿದೆ. ಮೊದಲೇ ನಿಗದಿಪಡಿಸಿದ ತೆರೆದ ಸ್ಥಳಗಳಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ 200 ಮಂದಿ, ಒಳಾಂಗಣದಲ್ಲಿ 100 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.


ಸೇವೆ ಇರಲಿದೆ: ವಾರಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಅಗತ್ಯ ತುರ್ತು ಸೇವೆಗಳನ್ನು ಹೊರತುಪಡಿಸಿದರೆ ಸಾರ್ವಜನಿಕ ಬಸ್ ಸೇವೆ ಇರುವುದಿಲ್ಲ. ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮುಕ್ತ ಸಂಚಾರಕ್ಕೆ ಅವಕಾಶ. ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರದಲ್ಲಿ ಯಾವುದೆ ವ್ಯತ್ಯಯ ಇಲ್ಲ. ಪ್ರತಿ 20 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ. ಹೊರಗಿನಿಂದ ನಗರಕ್ಕೆ ಬರುವ ಪ್ರಯಾಣಿಕರು ರೈಲ್ವೆ, ಬಸ್ ನಿಲ್ದಾಣಗಳಿಂದ ತಮ್ಮ ಸ್ಥಳಗಳಿಗೆ ತೆರಳಲು ಅವಕಾಶವಿದೆ. ಆದರೆ, ಟಿಕೆಟ್ ಹೊಂದಿರುವುದು ಕಡ್ಡಾಯವಾಗಿದೆ.


ಏನಿರುವುದಿಲ್ಲ: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸಹಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಆಟೋರಿಕ್ಷಾ, ಕ್ಯಾಬ್, ಓಲಾ, ಊಬರ್ ಸಂಚಾರಕ್ಕೆ ಅವಕಾಶವಿಲ್ಲ. ಎಲ್ಲ ಹೊಟೇಲ್, ರೆಸ್ಟೋರೆಂಟ್, ಬಾರ್, ಪಬ್‍ಗಳು ಬಂದ್ ಸಂಪೂರ್ಣ ಬಂದ್ ಆಗಲಿವೆ. ಕೋವಿಡ್ ದೃಢ ಪ್ರಮಾಣವನ್ನು ಆಧರಿಸಿ ಆಯಾ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಅವಕಾಶ ಮತ್ತು ನಿರ್ಬಂಧ ಹೇರುವ ಕುರಿತು ತೀರ್ಮಾನ ಮಾಡಲಿದ್ದಾರೆ.


Previous Post Next Post