ಮೇಕೆದಾಟು ಪಾದ ಯಾತ್ರೆಗೆ ಭರದ ಸಿದ್ಧತೆ: ಕನಕಪುರಕ್ಕೆ ಇಂದು ಡಿಕೆಶಿ ಸಿದ್ದರಾಮಯ್ಯ

ಮೇಕೆದಾಟು ಪಾದ ಯಾತ್ರೆಗೆ ಭರದ ಸಿದ್ಧತೆ: ಕನಕಪುರಕ್ಕೆ ಇಂದು ಡಿಕೆಶಿ ಸಿದ್ದರಾಮಯ್ಯ  


ರಾಮನಗರ: ಕಾಂಗ್ರೆಸ್ ನೇತೃತ್ವದಲ್ಲಿ ಕನಕಪುರ ತಾಲ್ಲೂಕಿನ ಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.


ಭಾನುವಾರ ಬೆಳಿಗ್ಗೆ 8.30ಕ್ಕೆ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಅರ್ಕಾವತಿ, ವೃಷಭಾವತಿ ಹಾಗೂ ಕಾವೇರಿ ನದಿಗಳು ಸೇರುವ ಸಂಗಮದಲ್ಲಿ ನದಿ ದಂಡೆಯಲ್ಲೇ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ.


'ನೀರಿನಾಗಿ ನಡಿಗೆ' ಎಂಬ ಧ್ಯೇಯದೊಂದಿಗೆ 11 ದಿನ ಪಾದಯಾತ್ರಿಗರು ಬೆಂಗಳೂರಿನತ್ತ ಹೆಜ್ಜೆ ಹಾಕಲಿದ್ದಾರೆ. ಸಂಗಮದಿಂದ ಕನಕಪುರ, ರಾಮನಗರ, ಬಿಡದಿ, ಕೆಂಗೇರಿ ಮಾರ್ಗವಾಗಿ ಪಾದಯಾತ್ರೆ ಸಾಗಲಿದೆ.


ಮೂಲಸೌಕರ್ಯ ವ್ಯವಸ್ಥೆ: ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಪಾದಯಾತ್ರಿಕರಿಗೆ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ಪಾದಯಾತ್ರೆ ಹಾದುಹೋಗುವ ರಸ್ತೆಗಳನ್ನು ಈಗಾಗಲೇ ದುರಸ್ತಿ ಮಾಡಲಾಗುತ್ತಿದೆ. ಈ ಮಾರ್ಗದಲ್ಲಿ ಈಗಾಗಲೇ ಇರುವ ಸಮುದಾಯ ಶೌಚಾಲಯಗಳನ್ನು ದುರಸ್ತಿಗೊಳಿಸಲಾಗಿದ್ದು, ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.


ಕನಕಪುರದ ರೂರಲ್‌ ಕಾಲೇಜು ಮೈದಾನದಲ್ಲಿ ನೂರಾರು ತಾತ್ಕಾಲಿಕ ಶೌಚಾಲಯಗಳು ಹಾಗೂ ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಜೊತೆಗೆ, ಊಟೋಪಚಾರದ ವ್ಯವಸ್ಥೆಗಾಗಿ ಸಮಿತಿಗಳನ್ನು ರಚಿಸಲಾಗಿದೆ. ಮಾರ್ಗದಲ್ಲಿನ ಗ್ರಾಮಗಳ ಕಾಂಗ್ರೆಸ್ ಮುಖಂಡರಿಗೂ ವಿವಿಧ ಜವಾಬ್ದಾರಿ ನೀಡಲಾಗಿದೆ. ಪ್ರತಿದಿನ ಸರಾಸರಿ 14ರಿಂದ 16 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು, ಮಾರ್ಗದಲ್ಲಿನ ಎಲ್ಲ ಹೋಟೆಲ್‌, ರೆಸಾರ್ಟ್‌ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಲಾಗುತ್ತಿದೆ.


ಮೊದಲ ದಿನ ಡಿ.ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಪಾದಯಾತ್ರಿಗಳು ತಂಗಲಿದ್ದಾರೆ. ಇದಕ್ಕಾಗಿ ಇಡೀ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆದಿದ್ದು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಪಾದಯಾತ್ರೆ ಕುರಿತು ಅಲ್ಲಲ್ಲಿ ಗೋಡೆ ಬರಹಗಳು ಗಮನ ಸೆಳೆಯುತ್ತಿವೆ. ಕನಕಪುರದ ತುಂಬೆಲ್ಲ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.


'ಸಂಗಮದ ಕಡೆ ಪ್ರವೇಶಿಸದಂತೆ ನಿರ್ಬಂಧ'

ಪಾದಯಾತ್ರೆ ನಡೆಯಲಿರುವ ಸಂಗಮ ಪ್ರದೇಶದಲ್ಲಿ ವಾರಾಂತ್ಯದ ಕರ್ಫ್ಯೂ ಅಂಗವಾಗಿ ಜಿಲ್ಲಾಡಳಿತವು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ಕಾಯತೊಡಗಿದ್ದು, ಸದ್ಯ ಯಾರನ್ನೂ ಸಂಗಮದ ಕಡೆಗೆ ಬಿಡುತ್ತಿಲ್ಲ.


ಪಾದಯಾತ್ರೆ ಮೇಲೆ ಕಣ್ಣಿಡಲು ಬರೋಬ್ಬರಿ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸರು ಸರ್ಕಾರದ ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ಜಿಲ್ಲಾ ಗಡಿಗಳಲ್ಲಿಯೇ ಕಾರ್ಯಕರ್ತರನ್ನು ತಡೆಯುವ ಪ್ರಯತ್ನವೂ ಆಗುವ ನಿರೀಕ್ಷೆ ಇದೆ. ಅಗತ್ಯ ಬಿದ್ದಲ್ಲಿ ಪಾದಯಾತ್ರಿಗಳ ಬಂಧನಕ್ಕೂ ಪೊಲೀಸರು ಸಜ್ಜಾಗಿದ್ದಾರೆ.


ಕಾಂಗ್ರೆಸ್ ನಾಯಕರ ದಂಡು

ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯೇ ಹಲವು ಕಾರ್ಯಕರ್ತರು ಕನಕಪುರಕ್ಕೆ ಬಂದಿಳಿದಿದ್ದು, ಅವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಬೆಳಿಗ್ಗೆ ಕನಕಪುರಕ್ಕೆ ಬರಲಿದ್ದು, ಅವರೊಂದಿಗೆ ಕಾಂಗ್ರೆಸ್ ನಾಯಕರ ದಂಡೇ ಬರುವ ನಿರೀಕ್ಷೆ ಇದೆ.

Previous Post Next Post