ವ್ಯಾಪಕವಾಗುತ್ತಿರುವ ಮತೀಯ ದ್ವೇಷ ಬೆಳೆಸುವ ಪ್ರಕರಣಗಳು: ಎಸ್.ವೈ.ಎಸ್.ಕಳವಳ

ವ್ಯಾಪಕವಾಗುತ್ತಿರುವ ಮತೀಯ ದ್ವೇಷ ಬೆಳೆಸುವ ಪ್ರಕರಣಗಳು: ಎಸ್.ವೈ.ಎಸ್.ಕಳವಳ


ಸರ್ವ ಜನಾಂಗದ ಶಾಂತಿಯುತ ಬಾಳ್ವೆಗೆ ವಿಶ್ವ ಮಾನ್ಯತೆ ಪಡೆದಿದ್ದ ಭಾರತ ದೇಶವು ಇತ್ತೀಚಿನ ದಿನಗಳಲ್ಲಿ ಪರಸ್ಪರ  ಕೋಮು ವೈಷಮ್ಯ ಮತ್ತು ದ್ವೇಷವನ್ನು ಬೆಳೆಸುವ ದುರದೃಷ್ಟಕರ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿರುವುದರ ಕುರಿತು ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ಕರ್ನಾಟಕ ರಾಜ್ಯ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ.


ಬಲಿಷ್ಠವಾದ ಸಂವಿಧಾನದ ಅಡಿಯಲ್ಲಿ ಜಾತಿ ಮತಗಳಿಗೆ ಅತೀತವಾದ ಮಾನವ ಸೌಹರ್ದತೆಗೆ ಮಹತ್ವ ಕೊಟ್ಟಿದ್ದ ನಮ್ಮ ದೇಶವು ಈ ನಿಟ್ಟಿನಲ್ಲಿ ಜಗತ್ತಿಗೇ ಮಾದರಿಯಾಗಿತ್ತು. ಆದರೆ ರಾಜಕೀಯ ಲೆಕ್ಕಾಚಾರ ಮತ್ತು ಅಧಿಕಾರದ ಬಲದಿಂದ ನಡೆಯುತ್ತಿರುವ ಇಂತಹ   ಘಟನೆಗಳನ್ನು ನಿಯಂತ್ರಿಸಲು ಸರಕಾರ ಕಠಿಣ ಕ್ರಮಗಳನ್ನು ಅನುಸರಿಸಬೇಕೆಂದು ಮಂಗಳೂರು,ಪಡೀಲ್ ಇಲ್ಮ್ ಸೆಂಟರ್‌ನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಗ್ರಹಿಸಲಾಗಿದೆ. ಮದುವೆ ಪ್ರಾಯದ ವಿಚಾರ ಮತ್ತು ಮತಾಂತರ ನಿಷೇಧ ನಿಯಮದಲ್ಲೂ ಕೇಂದ್ರ-ರಾಜ್ಯ ಸರಕಾರಗಳ ನಡೆಗಳನ್ನು ಮರುಪರಿಶೀಲನೆ ಮಾಡಬೇಕೆಂದೂ ಸಂಘಟನೆ ಅಪೇಕ್ಷಿಸಿದೆ.


ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಹಿರಿಯ ನಾಯಕ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಉದ್ಘಾಟಿಸಿದರು. ಕಾರ್ಯದರ್ಶಿಗಳಾದ ಜಿ.ಎಂ.ಕಾಮಿಲ್ ಸಖಾಫಿ, ಕೆಕೆಎಂ ಕಾಮಿಲ್ ಸಖಾಫಿ, ಬಶೀರ್ ಸ‌ಅದಿ ಬೆಂಗಳೂರು, ಅಬ್ದುಲ್‌ ಹಮೀದ್ ಬಜಪೆ,ಹನೀಫ್ ಹಾಜಿ ಉಳ್ಲಾಲ,ಹಂಝ ನೆಲ್ಲಿಹುದಿಕೇರಿ, ಖಾಸಿಂ ಪದ್ಮುಂಜ ವಿವಿಧ ಯೋಜನೆಗಳನ್ನು ಮಂಡಿಸಿದರು. ಕೋಶಾಧಿಕಾರಿ ಅಬ್ದುಲ್‌ ಹಕೀಂ ಕೊಡ್ಲಿಪೇಟೆ, ಹಿರಿಯ ಸದಸ್ಯ ಉಸ್ಮಾನ್ ಸ‌ಅದಿ ಪಟ್ಟೋರಿ ಶುಭ ಹಾರೈಸಿದರು.
ಎಪಿಎಸ್ ತಂಙಳ್ ಉಪ್ಪಳ್ಳಿ ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಹಫೀಲ್ ಸ‌ಅದಿ ಕೊಳಕೇರಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.


Previous Post Next Post