ಬೆಳಗಾವಿ ವಿಮಾಣ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬೈ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಾಳೆ ಅಥವಾ ನಾಡಿದ್ದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಸಭೆ ನಡೆಸಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಿರುವ ನೈಟ್ ಕರ್ಪ್ಯೂ ಮುಂದುವರಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಳೆದ ಒಂದು ವಾರದಲ್ಲಿ ಇಡೀ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿದೆ. ಕೋವಿಡ್ ಯಾವ ರೀತಿ ಹರಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಬೆಂಗಳೂರಿನಲ್ಲೂ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಸಚಿವ ಆರ್. ಅಶೋಕ ಲಾಕ್‌ಡೌನ್ ಬಗ್ಗೆ ಮಾತನಾಡಿದ್ದಾರೆ. ನಮ್ಮ ನಿಲುವು ಬಹಳ ಸ್ಪಷ್ಟ ಇದೆ. ಹಿಂದೆಲ್ಲ ಲಾಕ್‌ಡೌನ್ ಆಗಿತ್ತು. ಅದು ಆಗಬಾರದು ಅಂತ ಈಗ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದೇವೆ. ಆರ್. ಅಶೋಕ ಹೇಳಿದ ಅರ್ಥವೇ ಅದು. ಜನರು ಅದಕ್ಕೆ ಸಹಕಾರ ಕೊಟ್ಟರೆ ಲಾಕ್‌ಡೌನ್ ಆಗುವುದಿಲ್ಲ ಎಂದರು.
ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆ ಆಗುತ್ತಿವೆ. ಮಹಾರಾಷ್ಟ್ರದಿಂದ ಬೆಳಗಾವಿ ಗಡಿ ಪ್ರವೇಶಿಸುವ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ. ಗಡಿಯಲ್ಲಿ ಕಟ್ಟಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಕರ್ನಾಟಕಕ್ಕೆ ಬರುವವರಿಗೆ ಎರಡು ಡೋಸ್ ಲಸಿಕೆ ಮತ್ತು ಹಾಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಅಂಥವರಿಗೆ ಮಾತ್ರ ಪ್ರವೇಶ ಇರಲಿದೆ ಎಂದು ಸಿಎಂ ತಿಳಿಸಿದರು.
ಬೆಳಗಾವಿ ಜತೆಗೆ ಅಕ್ಕ ಪಕ್ಕದ ಚೆಕ್‌ಪೋಸ್ಟ್ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ವಿಜಯಪುರ ಜಿಲ್ಲೆ ಸೇರಿ ಇನ್ನಿತರ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಮಾಡಲಾಗಿದೆ, ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿಯೂ ಚೆಕ್‌ಪೋಸ್ಟ್ ಗಳು ಆಗಬೇಕು. ಇದರಿಂದ ಕೆಲವು ಪ್ರಯಾಣಿಕರಿಗೆ ತೊಂದರೆ ಆಗಬಹುದು. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳೀದರು.
ರಾಜ್ಯದಲ್ಲಿ ಕೇವಲ ನಿರ್ಬಂಧ ಅಷ್ಟೇ ಅಲ್ಲ, ಪೂರ್ವ ತಯಾರಿ ಮಾಡಬೇಕಿದೆ. ಕಳೆದ ಬಾರಿ ಆಮ್ಲಜನಕ ಕೊರತೆ ಆಗಿತ್ತು. ಈ ಸಲ ಅಂಥ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ತಯಾರಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್, 4 ಸಾವಿರಕ್ಕೂ ಹೆಚ್ಚು ಐಸಿಯು ಬೆಡ್ ನಿರ್ಮಿಸಲು ತೀರ್ಮಾನಿಸಿದ್ದೇವೆ. ಔಷಧಿ ಇಂಡೆಂಟ್ ಹಾಕಿ ಸಿದ್ಧತೆಗೆ ಸೂಚನೆ ಕೊಟ್ಟಿದ್ದೇವೆ. ಜ. 3ರಿಂದ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.