ಮೇಕೆದಾಟು ಪಾದಯಾತ್ರೆಗೆ ಜನಬೆಂಬಲ, ಹರಿದು ಬಂದ ಜನಸಾಗರ

ಮೇಕೆದಾಟು ಪಾದಯಾತ್ರೆಗೆ ಜನಬೆಂಬಲ, ಹರಿದು ಬಂದ ಜನಸಾಗರ


ರಾಮನಗರ: ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಭಾನುವಾರ ಬೆಳಿಗ್ಗೆ ಆರಂಭಗೊಂಡ ಮೇಕೆದಾಟು ಪಾದಯಾತ್ರೆಗೆ ಜನಸಾಗರವೇ ಹರಿದು ಬರುತ್ತಿದೆ. ಬೆಳಿಗ್ಗೆ 9.30ರ ವೇಳೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಹಸಿರು ನಿಶಾನೆ ತೋರಿದರು.


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. 


ಕೋವಿಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ತಡೆ ಒಡ್ಡಬಹುದು ಎನ್ನಲಾಗಿತ್ತು. ಆದರೆ ಸದ್ಯ ಅಂತಹ ಯಾವ ಘಟನೆಗಳೂ ನಡೆದಿಲ್ಲ. ಕಾಂಗ್ರೆಸ್ ನೇತೃತ್ವದ ಪಾದಯಾತ್ರೆ ಸುಗಮವಾಗಿ ನಡೆದಿದ್ದು, ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸಂಗಮದತ್ತ ಬಂದಿದ್ದಾರೆ. ಕನಕಪುರ-ಮೇಕೆದಾಟು ರಸ್ತೆ ತುಂಬೆಲ್ಲ ವಾಹನಗಳೇ ತುಂಬಿಕೊಂಡಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಪಾದಯಾತ್ರೆಗೆ ಬರುವವರಿಗೆ ಮಾಸ್ಕ್‌, ಸ್ಯಾನಿಟೈಸರ್, ಟೀ ಶರ್ಟ್‌ಗಳನ್ನು ವಿತರಿಸಲಾಗುತ್ತಿದೆ. ಊಟೋಪಚಾರದ ಜೊತೆಗೆ ಆಯೋಜಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡುತ್ತಿದ್ದರೂ ಜನರು ಮಾತ್ರ ಸ್ಪಂದಿಸುತ್ತಿಲ್ಲ.


ಮೌನವಾದ ಪೊಲೀಸ್‌ ಇಲಾಖೆ: ಕೋವಿಡ್ ಕರ್ಫ್ಯೂ ಕಾರಣಕ್ಕೆ ಸಂಗಮ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಈ ನಡುವೆಯೂ ಸಾವಿರಾರು ಮಂದಿ ಸಂಗಮಕ್ಕೆ ಬರುತ್ತಿದ್ದು, ಪೊಲೀಸರು ಮಾತ್ರ ಯಾವುದೇ ಕ್ರಮ ವಹಿಸಿಲ್ಲ.


ಪಾದಯಾತ್ರೆ : ಬಿಸಿಲ ಧಗೆಗೆ ಸಿದ್ದು ಸುಸ್ತು 


ರಾಮನಗರ: ಮೇಕೆದಾಟು ಪಾದಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಸ್ತಾಗಿದ್ದಾರೆ. ಬಿಸಿಲಿನ ಕಾರಣಕ್ಕೆ ಸುಸ್ತಾದ ಸಿದ್ದರಾಮಯ್ಯ ಸ್ವಲ್ಪ ದೂರ ನಡೆಯುತ್ತಿದ್ದಂತೆ ಬಳಲಿದ್ದಾರೆ.

ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಅವರು ನಡಿಗೆ ಬಿಟ್ಟು ಕಾರ್ ಏರಿದ್ದಾರೆ.

Previous Post Next Post