ನೀರಿಗಾಗಿ ನಡಿಗೆ: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸಂಗಮದಿಂದ ಯಾತ್ರೆ ಆರಂಭ, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ, ಗೆಸ್ಟ್ ಹೌಸ್ ಗಳನ್ನು ಮುಚ್ಚಲು ಸರಕಾರದ ಆದೇಶ
ನಿರೀಕ್ಷೆಯಂತೆ ಎಂಟೂ ಮೂವತ್ತಕ್ಕೆ ಪಾದಯಾತ್ರೆ ಆರಂಭಗೊಳ್ಳಲಿದ್ದು ಕಾರ್ಯಕರ್ತರು ಮೇಕೆದಾಟುವಿನ ಸಂಗಮದತ್ತ ಧಾವಿಸುತ್ತಿದ್ದಾರೆ.ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಸೇರಿದಂತೆ ಒಟ್ಟು 169 ಕಿಮೀ ದೂರ ಹಾದುಹೋಗುವ ಈ ಪಾದಯಾತ್ರೆಗೆ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ಎತ್ತಿವೆ.
ಮೇಕೆದಾಟು ಪಾದಯಾತ್ರೆಗೆ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಸಾಥ್
ಬೆಂಗಳೂರು : ಭಾನುವಾರ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ನಟ ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ.
ನಾಳೆ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಕೈಗೊಳ್ಳಲಾಗಿದ್ದು, ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ನಾಳೆಯಿಂದ ಪಾದಯಾತ್ರೆ ಆರಂಭವಾಗಲಿದ್ದು, ನಾಳೆ ಬೆಳಗ್ಗೆ ಶಿವರಾಜ್ ಕುಮಾರ್ ಅವರು ಮೇಕೆದಾಟು ಪಾದಯಾತ್ರೆಯನ್ನು ಉದ್ಘಾಟಿಸಲಿದ್ದಾರೆ.
ಪಕ್ಷಾತೀತವಾಗಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಗೆ ಚಿತ್ರೋದ್ಯಮ ಬೆಂಬಲ ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಜಯಮಾಲಾ ಅವರು ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಪಾದಯಾತ್ರೆ ತಡೆಯಲೆಂದೇ ನಿಷೇಧಾಜ್ಞೆ ವಿಧಿಸಿದ್ದಾರೆ: ಸಿದ್ದು ಕಿಡಿ
ಬೆಂಗಳೂರು (ಜ. 9): ಮೇಕೆದಾಟು ಪಾದಯಾತ್ರೆ (Mekedatu Padayatre) ತಡೆಯಬೇಕು ಎಂಬ ದುರುದ್ದೇಶದಿಂದ ರಾಜ್ಯ ಸರ್ಕಾರ ರಾಮನಗರ (Ramanagara) ಜಿಲ್ಲೆಗೆ ಸೀಮಿತವಾಗಿ 144 ಸೆಕ್ಷನ್ ಜಾರಿಗೊಳಿಸಿದೆ. ನಾವು ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಬಳಿ 144 ಸೆಕ್ಷನ್ ಜಾರಿಯಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಹಾಗೇನಾದರೂ ಜಾರಿ ಮಾಡಿದ್ದರೆ ನಾಲ್ಕೇ ಜನ ಪಾದಯಾತ್ರೆ ಮಾಡುತ್ತೇವೆ. ನಮ್ಮ ಪಾದಯಾತ್ರೆ ಘೋಷಣೆಯಾಗಿ ಎರಡು ತಿಂಗಳಾಯ್ತು. ವಾರಾಂತ್ಯದ ಲಾಕ್ ಡೌನ್ ಘೋಷಣೆ ಆಗಿದ್ದು ಮೊನ್ನೆ ಮೊನ್ನೆ. ಈಗ ರಾಮನಗರಕ್ಕೆ ಸೀಮಿತವಾಗಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಗೆಸ್ಟ್ ಹೌಸ್‌ಗಳು ಸಿಗದಂತೆ ನಿರ್ಬಂಧ ಹೇರಿದ್ದಾರೆ. ಇದು ಬೇರೆ ಜಿಲ್ಲೆಗಳಲ್ಲಿ ಏಕಿಲ್ಲ? ಇದು ಹೇಗಾದರೂ ಮಾಡಿ ನಮ್ಮ ಪಾದಯಾತ್ರೆ ತಡೆಯುವ ದುರುದ್ದೇಶವನ್ನು ತೋರುತ್ತದೆ. ನಾವು ಕಾನೂನು ಗೌರವಿಸುತ್ತೇವೆ. ನಿಯಮ ಅನುಸರಿಸಿಯೇ ಪಾದಯಾತ್ರೆ ಮಾಡುತ್ತೇವೆ. ಆದರೂ ನಮ್ಮನ್ನು ಬಂಧಿಸುತ್ತಾರಾ ಬಂಧಿಸಲಿ. ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಎಂದರು