ಹಿಜಾಬ್ ವಿವಾದ: ಹೈಕೋರ್ಟ್ ನಲ್ಲಿ ಒಂದೂವರೆ ಗಂಟೆಗಳ ಕಾಲ ವಾದ ಪ್ರತಿವಾದ, 2.30 ಕ್ಕೆ ವಿಚಾರಣೆ ಮುಂದೂಡಿಕೆ

ಹಿಜಾಬ್ ವಿವಾದ: ಹೈಕೋರ್ಟ್ ನಲ್ಲಿ ಒಂದೂವರೆ ಗಂಟೆಗಳ ಕಾಲ ವಾದ ಪ್ರತಿವಾದ, 2.30 ಕ್ಕೆ ವಿಚಾರಣೆ ಮುಂದೂಡಿಕೆ


ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ತಾರಕ್ಕೇರಿರುವ ಹಿಜಾಬ್- ಕೇಸರಿ ಶಾಲು ವಿವಾದ ಬಗ್ಗೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಇಂದು ಕೈಗೆತ್ತಿಕೊಂಡಿತು. ಸುದೀರ್ಘ ವಾದ- ಪ್ರತಿವಾದ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದರು.


ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್‌ (ಶಿರವಸ್ತ್ರ) ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸಲ್ಲಿಸಿರುವ ಎರಡು ಪತ್ಯೇಕ ತಕರಾರು ಅರ್ಜಿಗಳ ವಿಚಾರಣೆಯು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ನ್ಯಾಯಪೀಠ ನಡೆಸಿತು.


ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಕುರಿತು ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಹೊಸದಾಗಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು.


ಈ ವೇಳೆ ವಾದ ಮಂಡಿಸಿದ ಮೊಹಮ್ಮದ್ ತಾಹಿರ್, ಹಲವು ಕಾಲೇಜುಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರ ಹೊಸ ನೀತಿ ರೂಪಿಸಲಿ. ಅಲ್ಲಿಯವರೆಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.


ಈ ಬಗ್ಗೆ ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದು, ಸರ್ಕಾರದ ಪರ ವಕೀಲ ಎ.ಜಿ. ಪ್ರಭುಲಿಂಗ ಈಗಾಗಲೇ ಸರ್ಕಾರ ಜಾರಿಗೊಳಿಸಿರುವ ಸಮವಸ್ತ್ರ ಕಡ್ಡಾಯ ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.


ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ಹಿಜಾಬ್ ಇಸ್ಲಾಂನ ಅಗತ್ಯ ಆಚರಣೆ ಎಂದು ಕುರಾನ್ ನಲ್ಲಿ ಉಲ್ಲೇಖವಿದೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಹಕ್ಕು ಉಲ್ಲಂಘಿಸಿದೆ. ಸಂವಿಧಾನದ 19(1)A ಹಾಗೂ 21ನೇ ವಿಧಿ ಅಡಿಯಲ್ಲಿ ಇಚ್ಛೆಯ ಬಟ್ಟೆ ಧರಿಸುವ ಹಕ್ಕಿದೆ ಎಂದರು.


ವಕೀಲ ದೇವದತ್ ಕಾಮತ್, ಧಾರ್ಮಿಕ ಆಚರಣೆ, ಸರ್ಕಾರದ ನಿಯಮದ ನಡುವೆ ಗೊಂದಲವಿದ್ದಾಗ ಕೋರ್ಟ್ ಇದನ್ನು ತೀರ್ಮಾನಿಸಬೇಕು ಎಂದು ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಲಕ್ಷ್ಮೀಂದ್ರ ತೀರ್ಥ ಸ್ವಾಮಿಯರ್ ವರ್ಸಸ್ ರಾಜ್ಯ, ಅಮೆರಿಕಾ ಸಂವಿಧಾನ, ಹಳೆಯ ತೀರ್ಪನ್ನು ಉಲ್ಲೇಖಿಸಿದರು.

Previous Post Next Post