ಹಿಜಾಬ್: ನಾಡಿನಲ್ಲಿ ಶಾಂತಿ ಕಾಪಾಡಲು ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು -ಸಮಸ್ತ ಉಲೆಮಾ ಒಕ್ಕೂಟ

ಹಿಜಾಬ್: ನಾಡಿನಲ್ಲಿ ಶಾಂತಿ ಕಾಪಾಡಲು ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು -ಸಮಸ್ತ ಉಲೆಮಾ ಒಕ್ಕೂಟ


ಕಲ್ಲಿಕೋಟೆ: ನಾಡಿನಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಆಡಳಿತ ವರ್ಗದ್ದಾಗಿದ್ದು, ಸಂಕುಚಿತ ಹಿತಾಸಕ್ತಿಗಳಿಗಾಗಿ ಅದರಲ್ಲಿ ಯಾವುದೇ ರಾಜಿಗೂ ಮುಂದಾಗಬಾರದು ಎಂದು ಸಮಸ್ತ  ಜಂಇಯ್ಯತುಲ್ ಉಲಮಾ ಕೇಂದ್ರ ಪರಿಷತ್ತು ಆಗ್ರಹಿಸಿದೆ.


ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಆರಂಭಗೊಂಡ ಹಿಜಾಬ್ ವಿರುದ್ಧ ಚಟುವಟಿಕೆಗಳು ಶಾಂತಿಗೆ ಭಂಗ ಉಂಟು ಮಾಡಿದೆ. ಈವರೆಗೂ ದೊರೆತಿದ್ದ ವಸ್ತ್ರ ಸ್ವಾತಂತ್ರ್ಯವನ್ನು ಏಕಾಏಕಿ ವಿವಾದಕ್ಕೀಡು ಮಾಡಿ ನಾಡಿನಲ್ಲಿ ಕೋಮು ಧ್ರುವೀಕರಣ ಸೃಷ್ಟಿಸುವುದು ಸರಿಯಲ್ಲ. ಶಾಂತಿಪ್ರಿಯರು ಎಚ್ಚರಿಕೆಯಿಂದ ಒಂದಾಗಿ ನಿಲ್ಲಬೇಕಾದ ಸಂದರ್ಭವಿದು. ದೇಶದಲ್ಲಿ ಎಲ್ಲಕ್ಕಿಂತಲೂ ನಮ್ಮ ಸಂವಿಧಾನವೇ ಶ್ರೇಷ್ಠ. ಸಂವಿಧಾನವು ಪ್ರಜೆಗೆ ಖಚಿತಪಡಿಸಿರುವ ಹಕ್ಕುಗಳನ್ನು ನಿರಾಕರಿಸಲಾಗದು. ಪ್ರಜೆಯು ತನ್ನ ವಿಶ್ವಾಸಾಚಾರಗಳ ಪ್ರಕಾರ ವಸ್ತ್ರ ಧರಿಸುವ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಬೇಕು. ನಾಡಿನ ಉತ್ತಮ ಭವಿಷ್ಯಕ್ಕಾಗಿ ಭೇದ ಭಾವಗಳಿಲ್ಲದೆ ಎಲ್ಲರೂ ಒಂದಾಗಿ ದೇಶದ ಬಹುತ್ವವನ್ನು ಎತ್ತಿ ಹಿಡಿದು ಮುನ್ನಡೆಯಬೇಕು ಎಂದು ಉಲಮಾ ಒಕ್ಕೂಟ ಅಭಿಪ್ರಾಯಪಟ್ಟಿತು.


ಇ. ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟಿಸಿದರು. ಸಯ್ಯಿದ್ ಅಲೀ ಬಾಫಖೀ ತಂಙಳ್, ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ, ಕೋಟೂರು ಕುಂಞಮ್ಮು ಮುಸ್ಲಿಯಾರ್, ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ಮೊದಲಾದವರು ಮಾತನಾಡಿದರು. ಎ ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಸ್ವಾಗತಿಸಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಧನ್ಯವಾದವಿತ್ತರು.

Previous Post Next Post