ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸಲು ಅವಕಾಶ ನೀಡಿದೆ: ಎ.ಪಿ.ಅಬೂಬಕರ್ ಮುಸ್ಲಿಯಾರ್

ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸಲು ಅವಕಾಶ ನೀಡಿದೆ: ಎ.ಪಿ.ಅಬೂಬಕರ್ ಮುಸ್ಲಿಯಾರ್


ಬೆಂಗಳೂರು, ಫೆ.21: ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತನ್ನ ಧರ್ಮವನ್ನು ಅನುಸರಿಸಲು ಅವಕಾಶ ನೀಡಿದೆ. ಆಡಳಿತ ನಡೆಸುವ ಸರಕಾರಗಳು ಯಾವುದೇ ಪಕ್ಷದವರಾಗಲಿ, ಸಂವಿಧಾನದ ಚೌಕಟ್ಟಿನಲ್ಲಿ ನಡೆದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಗ್ರಾಂಡ್ ಮುಫ್ತಿ ಆಫ್ ಇಂಡಿಯಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ತಿಳಿಸಿದರು.


ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಂವಿಧಾನದ ಚೌಕಟ್ಟು ಮೀರಿ ನಡೆದಾಗ ಸಮಸ್ಯೆ ಗಳು ಎದುರಾಗುತ್ತವೆ ಎಂದರು.


ನಮ್ಮ ದೇಶದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಪ್ರತಿಯೊಬ್ಬರೂ ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಅನುಸರಿಸಲು ಮುಕ್ತವಾಗಿದ್ದಾರೆ ಎಂದರು.


ಕರ್ನಾಟಕದಲ್ಲಿ ಇತ್ತೀಚೆಗೆ ಹಿಜಾಬ್ ಗೆ ಸಂಬಂಧಿಸಿದಂತೆ ವಿವಾದ ಎಬ್ಬಿಸಲಾಗಿದೆ. ಹಿಜಾಬ್ ಅನ್ನು ಮುಸ್ಲಿಮ್ ಹೆಣ್ಣು ಮಕ್ಕಳು ನಿನ್ನೆ, ಮೊನ್ನೆಯಿಂದ ಧರಿಸುತ್ತಿಲ್ಲ. ಶತಮಾನಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಈಗ ಯಾಕೆ ವಿವಾದ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.


ಸಿಖ್ ಸಮುದಾಯದ ಗಂಡು ಮಕ್ಕಳು ತಮ್ಮ ತಲೆಗೆ ಪೇಟ ಕಟ್ಟುತ್ತಾರೆ. ಯುವಕರು ಹಾಗೂ ಪುರುಷರು ಗಡ್ಡ ಬಿಡುತ್ತಾರೆ. ಇದು ಅವರ ಸಂಸ್ಕೃತಿ. ಕ್ರೈಸ್ತ ನನ್ ಗಳು ತಮ್ಮ ತಲೆಗೆ ಸ್ಕಾರ್ಫ್ ಕಟ್ಟುತ್ತಾರೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ನಾವು ಮನವಿ ಮಾಡುತ್ತೇವೆ. ನ್ಯಾಯಾಲಕ್ಕೂ ಇದನ್ನೆ ಕೋರುತ್ತೇವೆ ಎಂದು ಅವರು ಹೇಳಿದರು.


ನಮ್ಮ ಕೇರಳ ರಾಜ್ಯದಲ್ಲಿ ಶಬರಿಮಲೆ‌ ದೇವಸ್ಥಾನ ಇದೆ. ಅಲ್ಲಿ ಹಿಂದೂಗಳು ಕಪ್ಪು ಬಟ್ಟೆ ಧರಿಸಿ, ಮಾಲೆ ಹಾಕುತ್ತಾರೆ. ಹಲವಾರು ವಿದ್ಯಾರ್ಥಿಗಳು ಇದನ್ನು ಪಾಲಿಸುತ್ತಾರೆ. ಅವರು ತರಗತಿಗಳಲ್ಲಿ ವ್ರತ ಆಚರಿಕೊಂಡು ಬಂದರೆ ಯಾರಿಗೂ ಅಭ್ಯಂತರ ಇರಲ್ಲ. ಏಕೆಂದರೆ ಅದು ಅವರ ಸಂಸ್ಕೃತಿ ಎಂದು ಗೊತ್ತಿದೆ ಎಂದು ಎಪಿ ಉಸ್ತಾದ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಕ್ಯಾಲಿಕಟ್ ನ ಮಕರ್ಝ್ ನಾಲೇಜ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಬ್ದುಲ್ ಹಕೀಮ್ ಅಝ್ಹರಿ, ಜುಮ್ಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ಉಪಸ್ಥಿತರಿದ್ದರು

Previous Post Next Post