ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಣೆ: ಗ್ರ್ಯಾಂಡ್ ಮುಫ್ತಿ ಎ ಪಿ ಉಸ್ತಾದ್ ಖಂಡನೆ

ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಣೆ: ಗ್ರ್ಯಾಂಡ್ ಮುಫ್ತಿ ಎ ಪಿ ಉಸ್ತಾದ್ ಖಂಡನೆ 

ಕೋಝಿಕ್ಕೋಡ್:‌ ಕರ್ನಾಟಕದಲ್ಲಿ ಇತ್ತೀಚೆಗೆ ಹಿಜಾಬ್‌ ಧಾರಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡುತ್ತಿರುವ ಕುರಿತು ಭಾರತೀಯ ಗ್ರ್ಯಾಂಡ್‌ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್‌ ಮುಸ್ಲಿಯಾರ್‌ ಖಂಡನೆ ವ್ಯಕ್ತಪಡಿಸಿದ್ದಾರೆ.


"ಹಿಜಾಬ್‌ ಧಾರಿ ವಿದ್ಯಾರ್ಥಿನಿಯರಿಗೆ ಶಾಲೆಗಳಿಗೆ ಪ್ರವೇಶ ನಿರಾಕರಿಸುತ್ತಿರುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಭಾರತವು ಬಹುತ್ವ ಸಾರುವ ಜಾತ್ಯತೀತ ರಾಷ್ಟ್ರವಾಗಿದ್ದು, ಈ ಕುರಿತು ಆಳುವವರಿಗೆ ಅರ್ಥವಾಗದಿರುವುದು ವಿಪರ್ಯಾಸ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


"ಈ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪ್ರತ್ಯೇಕಿಸುವ ಹುನ್ನಾರ ಕೆಲವರ ಮನದಲ್ಲಿ ಮೂಡಿರುವ ಕುರಿತು ಅನುಮಾನಗಳಿವೆ. ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತಾನು ಬಯಸಿದ ಧರ್ಮವನ್ನು ಆಚರಿಸುವ, ಪಾಲಿಸುವ ಹಕ್ಕುಗಳಿವೆ. ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಪರಿಗಣಸಲಾಗುತ್ತಿದೆ. ಧರ್ಮವನ್ನು ಪಾಲಿಸುವವರಿಗೆ ಶಿಕ್ಷಣ ನಿರಾಕರಿಸುವುದು ಸರಿಯಲ್ಲ. ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್‌ ಧರಿಸುವ ಹಕ್ಕನ್ನೂ ಸಂವಿಧಾನ ನೀಡಿದೆ" ಎಂದು ಎ.ಪಿ. ಉಸ್ತಾದ್‌ ಹೇಳಿದ್ದಾರೆ.


"ನಮ್ಮ ಸಂವಿಧಾನವು ನಮಗಿಷ್ಟವಾದ ಧರ್ಮವನ್ನು ಪಾಲಿಸಲು ಮತ್ತು ಅಳವಡಿಸಿಕೊಳ್ಳಲು ಸ್ವಾತಂತ್ರ್ಯ ನೀಡಿರುವಾಗ, ಇಲ್ಲಿ ಕೆಲವರು ಯಾವ ಆಧಾರದಲ್ಲಿ ಕೋಮು ಧ್ರುವೀಕರಣ ನಡೆಸುತ್ತಿದ್ದಾರೆ ಮತ್ತು ಯಾಕೆ ಈ ಸ್ವಾತಂತ್ರ್ಯವನ್ನು ನಿರಾಕರಿಸುತ್ತಾರೆ? 2015ರ ಕೇರಳ ಹೈಕೋರ್ಟ್‌ ನೀಡಿದ ತೀರ್ಪಿನಲ್ಲಿ ಬಹುಜನಾಂಗೀಯ ದೇಶವಾದ ಭಾರತದಲ್ಲಿ ʼವಸ್ತ್ರಸಂಹಿತೆʼ ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದ್ದು ನನಗೆ ಇನ್ನೂ ನೆನಪಿದೆ. ಹಿಜಾಬ್‌ ಮಾತ್ರವಲ್ಲದೇ ಸಿಖ್ಖರ ಪೇಟ, ಕ್ರೈಸ್ತರ ಶಿಲುಬೆ ಇವೆಲ್ಲವೂ ನಮ್ಮ ದೇಶದ ವೈವಿಧ್ಯಗಳಾಗಿವೆ. ಈ ಎಲ್ಲಾ ಧರ್ಮಗಳನ್ನು ಒಳಗೊಳ್ಳಲು ಸೆಕ್ಯುಲರಿಸಂ ನಮಗೆ ಕಲಿಸುತ್ತದೆ. ಇತರ ಧರ್ಮಗಳಿಗಿಲ್ಲದ ನಿರ್ಬಂಧ ಮುಸ್ಲಿಮರಿಗೆ ಮಾತ್ರ ಎನ್ನುವುದು ಮುಸ್ಲಿಮರನ್ನು ಗುರಿಯಾಗಿಸುವ ಭಾಗವಾಗಿ ಅರ್ಥೈಸಬಹುದಾಗಿದೆ. ಸಂಬಂಧಪಟ್ಟವರು ಇಂತಹಾ ನಡೆಗಳಿಂದ ಹಿಂದೆ ಸರಿಯಬೇಕು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಕಾಂತಪುರಂ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Previous Post Next Post