ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ (ಜುಲೈ 29) ಆಗಸ್ಟ್ ಒಂದರ ವರೆಗೆ ಸಂಜೆ 6ಕ್ಕೆ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ (ಜುಲೈ 29) ಆಗಸ್ಟ್ ಒಂದರ ವರೆಗೆ ಸಂಜೆ 6ಕ್ಕೆ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ 


ಮಂಗಳೂರು, ಜು.29: ಇಂದಿನಿಂದ (ಜು.29) ಆಗಸ್ಟ್ 1ರವರೆಗೆ ದ.ಕ. ಜಿಲ್ಲೆಯಲ್ಲಿ ಅಗತ್ಯ ಸೇವೆಯನ್ನು ಹೊರತುಪಡಿಸಿ ಎಲ್ಲ ಅಂಗಡಿಮುಂಗಟ್ಟುಗಳನ್ನು ಸಂಜೆ 6 ಗಂಟೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.


ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು, ಆಸ್ಪತ್ರೆ ಹಾಗು ಮೆಡಿಕಲ್ ಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಆ.1ರವರೆಗೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ತೆರೆಯಲು ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.


ಸ್ಥಳೀಯಾಡಳಿತ ಸಂಸ್ಥೆಗಳು ಅಂಗಡಿಗಳ ಮೇಲೆ ನಿಗಾ ಇರಿಸಬೇಕು. ಜನತೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಯೊಂದಿಗೆ ಸಹಕರಿಸಬೇಕು. ಆಸ್ಪತ್ರೆ, ಮೆಡಿಕಲ್ ಸೇರಿದಂತೆ ತುರ್ತು ಸೇವೆಗಳಿಗೆ ಈ ಆದೇಶ ಆನ್ವಯಿಸುವುದಿಲ್ಲ ಎಂದವರು ತಿಳಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.


ಕಾನೂನು ಕೈಗೆತ್ತಿಕೊಳ್ಳದಿರಿ, ಶಾಂತಿ ಕಾಪಾಡಿ: ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮನವಿ


ಮಂಗಳೂರು ಜು.29: ಜಿಲ್ಲೆಯಲ್ಲಿ ನಡಯುತ್ತಿರುವ ಅಹಿತಕರ ಘಟನೆಗಳು ಖಂಡನೀಯ ಮತ್ತು ವಿಷಾದನೀಯ. ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳದಿರಿ, ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕೆಂದು ಉಡುಪಿ, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ವಿನಂತಿ ಮಾಡಿದ್ದಾರೆ.


ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರ, ಗೃಹ ಇಲಾಖೆ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಈಗ ನಡೆದಿರುವ ಮೂವರು ಅಮಾಯಕರ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿರುವ ಖಾಝಿ, ಸಂಬಂಧಪಟ್ಟ ನಾಯಕರು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಶಾಂತಿಯ ಸಂದೇಶವನ್ನು ನೀಡಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Previous Post Next Post