ಮುಸ್ಲಿಂ ಸೆಂಟ್ರಲ್ ಕಮಿಟಿಯ ನಡೆ ಆದರ್ಶ ಪ್ರಾಯ :
ಡಾ.ಝೈನೀ ಕಾಮಿಲ್
ಇತ್ತೀಚೆಗೆ ದುಷ್ಕರ್ಮಿಗಳಿಂದ ಕ್ರೂರವಾಗಿ ಕೊಲೆಯಾದ ಸುಳ್ಯದ ಮಸೂದ್ ಹಾಗೂ ಸುರತ್ಕಲ್ನ ಫಾಝಿಲ್ ಕುಟುಂಬಕ್ಕೆ ತಲಾ ಮೂವತ್ತು ಲಕ್ಷ ರೂಪಾಯಿಗಳ ಧನಸಹಾಯ ಘೋಷಣೆ ಮಾಡುವ ಮೂಲಕ ಮುಸ್ಲಿಂ ಸೆಂಟ್ರಲ್ ಕಮಿಟಿಯು ಅತ್ಯಂತ ಮಾದರೀ ಯೋಗ್ಯ ಹಾಗೂ ಅಭಿನಂದನೀಯ ಕಾರ್ಯ ಮಾಡಿದೆಯೆಂದು ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಶ್ಲಾಘಿಸಿದ್ದಾರೆ.
ಅಮಾಯಕ ಮುಸ್ಲಿಂ ಯುವಕರಿಬ್ಬರು ಬರ್ಬರವಾಗಿ ಕೊಲೆಯಾಗಿ ಅದರಲ್ಲಿ ಮಸೂದ್ನ ಹತ್ಯೆಯಲ್ಲಿ ಭಾಗಿಯಾದ ಎಂಟು ಮಂದಿ ಸಂಘಪರಿವಾರದ ಕಾರ್ಯಕರ್ತರೆಂಬುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಫಾಝಿಲ್ ಹಂತಕರನ್ನು ಬಂಧಿಸುವಲ್ಲಿ ಗಮನಾರ್ಹ ಪ್ರಗತಿಯೇನೂ ಕಂಡುಬಂದಿಲ್ಲ. ಕೊಲೆಯಾದವರು ಮುಸ್ಲಿಮರಾದ ಕಾರಣ ರಾಜ್ಯ ಸರ್ಕಾರ ಮತ್ತು ರಾಜಕಾರಣಿಗಳು ತೋರುವ ನಿರ್ಲಕ್ಷ್ಯ ಮನೋಭಾವ ಕೊಲೆಗಿಂತಲೂ ಬೀಕರವಾದುದು.
ಪ್ರವೀಣ್ ನೆಟ್ಟಾರ್ ಹತ್ಯೆ ಯಾರು ಮಾಡಿದ್ದರೂ ಅದು ಖಂಡನೀಯ.ಸಂಘ ಪರಿವಾರದ ಕಾರ್ಯಕರ್ತರ ಗಲಭೆಯನ್ನು ಭಯಪಟ್ಟು ಅಮಾಯಕ ಮುಸ್ಲಿಂ ಯುವಕರನ್ನು ಈ ಕೊಲೆ ಕೇಸಿನಲ್ಲಿ ಫಿಕ್ಸ್ ಮಾಡುವ ಕೆಲಸ ಆಗಬಾರದು. ಮಸೂದ್ ಮತ್ತು ಫಾಝಿಲ್ ಹತ್ಯೆ ಪ್ರಕರಣ ಕೂಡಾ ಎನ್.ಐ.ಎ.ಗೆ ಹಸ್ತಾಂತರ ಮಾಡಬೇಕು. ನಿಜವಾದ ಹಂತಕರನ್ನು ಹೊರತರಬೇಕು.
ಪ್ರವೀಣ್ಗೆ ಸರಕಾರ ಘೋಷಿಸಿದ ಪರಿಹಾರ ಮತ್ತು ಕುಟುಂಬಕ್ಕೆ ನೀಡಿದ ಬೆಂಬಲಕ್ಕೆ ಮುಸ್ಲಿಮರು ಕೂಡಾ ಅಭಿನಂದಿಸುತ್ತಾರೆ. ಆದರೆ ಕೋಮುವಾದದ ಆಧಾರದಲ್ಲಿ ರಾಜ್ಯದ ಮುಖ್ಯಮಂತ್ರಿ ತೋರಿದ ತಾರತಮ್ಯ ಅತ್ಯಂತ ಲಜ್ಜೆಗೆಟ್ಟ ಕ್ರಮವಾಗಿದೆ. ಜತೆಗೆ ಜಾತ್ಯತೀತರು ಎನಿಸಿಕೊಂಡ ರಾಜಕೀಯ ಪಕ್ಷಗಳು ಕೂಡಾ ಇನ್ನೂ ಎಚ್ಚೆತ್ತುಕೊಳ್ಳದ್ದು ಬಹುದೊಡ್ಡ ದುರಂತ. ಈ ನಿಟ್ಟಿನಲ್ಲಿ ಸಮುದಾಯದ ನೋವಿಗೆ ದನಿಯಾಗಲು ಸಕಾಲಿಕವಾಗಿ ಮುಂದೆ ಬಂದ ಮುಸ್ಲಿಂ ಸೆಂಟ್ರಲ್ ಕಮಿಟಿಯು ಎಲ್ಲ ರೀತಿಯ ಅಭಿನಂದನೆ ಅರ್ಹಿಸುತ್ತದೆ ಎಂದು ಡಾ. ಝೈನೀ ಕಾಮಿಲ್ ಪ್ರಸ್ತಾಪಿಸಿದ್ದಾರೆ. ಸರಕಾರ ತಕ್ಷಣ ತನ್ನ ತಪ್ಪನ್ನು ಸರಿಪಡಿಸಲು ಮುಂದೆ ಬರಬೇಕೆಂದು ಅವರು ಆಗ್ರಹಿಸಿದ್ದಾರೆ.