ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಿಸಲು ಸಿಎಂ ಬೊಮ್ಮಾಯಿ ಸೂಚನೆ

ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಿಸಲು ಸಿಎಂ ಬೊಮ್ಮಾಯಿ ಸೂಚನೆ


ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭದ್ರತೆ ಹೆಚ್ಚಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದೆ ಎಂಬ ಹೇಳಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್‌ ಮಹಾನಿರ್ದೇಶಕರನ್ನು ಕರೆಸಿಕೊಂಡು ಚರ್ಚಿಸಿದ್ದು, ವಿರೋಧ ಪಕ್ಷದ ನಾಯಕರ ಭದ್ರತೆಯನ್ನು ತಕ್ಷಣವೇ ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದೇನೆ' ಎಂದರು

'ಸಿದ್ದರಾಮಯ್ಯ ಅವರ ಜತೆಗೂ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ಅವರಿಗೆ ಅಥವಾ ಅವರ ಸಿಬ್ಬಂದಿಗೆ ಬೆದರಿಕೆ ಕರೆ ಬಂದಿದ್ದರೆ ಅಂತಹ ಮಾಹಿತಿ ಹಂಚಿಕೊಳ್ಳುವಂತೆ ಮನವಿ ಮಾಡಿದ್ದೇನೆ. ಈ ವಿಷಯದ ಕುರಿತು ಸಮಗ್ರವಾಗಿ ತನಿಖೆ ನಡೆಸಲಾಗುವುದು' ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನವನ್ನು ಯಾರೇ ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಈಗ ಎರಡೂ ಕಡೆಯಿಂದ ತಪ್ಪುಗಳು ಆಗುತ್ತಿವೆ. ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲೆಗಳ ಎಸ್‌ಪಿಗಳಿಗೂ ನಿರ್ದೇಶನ ನೀಡುವಂತೆ ಡಿಜಿಪಿಯವರಿಗೆ ಸೂಚಿಸಲಾಗಿದೆ ಎಂದರು.


Previous Post Next Post